ಕಾಸರಗೋಡು: ನಾಡಿನಾದ್ಯಂತ ಮಾವಿನ ಮರಗಳು ಹೂವು ಬಿಟ್ಟು ಜನರ ಕಣ್ಮನ ಸೆಳೆಯುತ್ತಿರುವಾಗ ಇಲ್ಲೊಂದೆಡೆ ಹೂವು ಬಿಡದೆ ಮರ ಆಶ್ಚರ್ಯ ಮೂಡಿಸುತ್ತಿದೆ. ಪ್ರತೀ ವರ್ಷ ಈ ಕಾಲಾವಧಿಯಲ್ಲಿ ಹೂವು ಅರಳಿ ಮಾವಿನ ಮಿಡಿಗಳು ತುಂಬಿ ತುಳುಕುತ್ತಿದ್ದ ಈ ಮರದಲ್ಲಿ ಈಗ ಎಲೆಗಳು ಮಾತ್ರವೇ ಕಂಡುಬರುತ್ತಿದೆ. ಮಧೂರು ಪಂಚಾಯತ್ ಮಾಜಿ ಅಧ್ಯಕ್ಷ ಕೆ. ಗೋಪಾಲಕೃಷ್ಣರ ಕೂಡ್ಲುನಲ್ಲಿರುವ ಮನೆ ಮುಂದೆ ಇರುವ ಮಾವಿನ ಮರದಲ್ಲಿ ಈ ಬಾರಿ ಮಾವಿನ ಕಾಯಿ ಇಲ್ಲ. ಮಧೂರು-ಕಾಸರಗೋಡು ರಸ್ತೆ ಬದಿಯಲ್ಲೇ ಇರುವ ಈ ಮಾವಿನ ಮರದಲ್ಲಿ ಪ್ರತೀ ವರ್ಷ ಡಿಸೆಂಬರ್, ಜನವರಿ ತಿಂಗಳಲ್ಲಿ ಹೂವು ಬಿಟ್ಟು ನೋಡುಗರನ್ನು ಆಕರ್ಷಿಸುತ್ತಿತ್ತು. ಆದರೆ ಈ ಬಾರಿ ಯಾಕೆ ಹೂವು ಬಿಡಲಿಲ್ಲವೆಂದು ತಿಳಿಯದೆ ಚಿಂತಿಸುವಂತೆ ಮಾಡಿದೆ. ಕೆಲವು ಮಾವಿನ ಮರಗಳಲ್ಲಿ ಎರಡು ವರ್ಷಗಳಿಗೊಮ್ಮೆ ಹೂವು ಬಿಡುವುದಿದೆ. ಆದರೆ ಈ ಮರ ಹಾಗಲ್ಲ. ಪ್ರತೀ ವರ್ಷವೂ ಈ ಮರದಲ್ಲಿ ಹೂವು ಬಿಟ್ಟು ಧಾರಾಳ ಮಾವಿನಹಣ್ಣು ಲಭಿಸುತ್ತಿತ್ತು. ಆದರೆ ಈ ಬಾರಿ ಪ್ರಕೃತಿ ಮಾತೆ ಮುನಿಸಿಕೊಳ್ಳಲು ಕಾರಣವೇನೆಂದು ಜನರು ಆಶ್ಚರ್ಯಪಡುತ್ತಿದ್ದಾರೆ.






