ಕಾಸರಗೋಡು: ಕಾಸರಗೋಡು ನಗರದಲ್ಲಿ ಅಂಗಡಿಗಳಿಂದ ಸರಣಿ ಕಳ್ಳತನ ನಡೆದಿದೆ. ನಗರದ ಹೃದಯ ಭಾಗವಾದ ಎಂ.ಜಿ. ರಸ್ತೆಯಲ್ಲಿರುವ ಮೂರು ಅಂಗಡಿಗಳಿಂದ ಕಳವು ಹಾಗೂ ಒಂದರಿಂದ ಕಳವಿಗೆತ್ನ ನಡೆದಿದೆ. ನಿನ್ನೆ ರಾತ್ರಿ ಕಳ್ಳರು ಅಂಗಡಿಗಳಿಗೆ ನುಗ್ಗಿದ್ದಾರೆ. ಫೋರ್ಟ್ ರೋಡ್ ನಿವಾಸಿ ಶಾಲಿನಿ ಎಂಬವರ ಮಾಲಕತ್ವದಲ್ಲಿರುವ ವಿನ್ನರ್ ಫೂಟ್ ವೇರ್, ಯೂಸಫ್‌ರ ಮಾಲಕತ್ವದಲ್ಲಿ ರುವ ಮಿನಿ ಮಾರ್ಟ್ ಗ್ರೋಸರಿ ಶಾಪ್, ಮಾಂಙಾಡ್‌ನ ಎಂ.ಕೆ. ಶಂಸುದ್ದೀನ್‌ರ ಮಾಲಕತ್ವದಲ್ಲಿರುವ ಆಶ್ವಾಸ್ ಕಮ್ಯೂ ನಿಟಿ ಫಾರ್ಮಸಿ ಎಂಬಿಡೆಗಳಿಂದ ಕಳವು ನಡೆದಿದೆ. ಚೆಂಗಳ ಪಾಣಲದ ಅಬ್ದುಲ್ ಖಾದರ್‌ರ ಮಾಲಕತ್ವದಲ್ಲಿರುವ ತರಕಾರಿ ಅಂಗಡಿಯ ಬೀಗ ಮುರಿಯಲಾಗಿದ್ದು, ಗ್ರಿಲ್ಸ್ ತೆರೆಯಲಾಗದಿರುವುದರಿಂದ ಕಳ್ಳರಿಗೆ ಒಳಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಯೂಸಫ್‌ರ ಅಂಗಡಿಯಿಂದ ಸುಮಾರು 5 ಸಾವಿರ ರೂಪಾಯಿ ಕಳವಿಗೀಡಾಗಿದೆ. ಎರಡು ಪ್ಯಾಕೆಟ್ ಜ್ಯೂಸ್ ಕುಡಿದು ಕಳ್ಳರು ಇಲ್ಲಿಂದ ಕಾಲ್ಕಿತ್ತಿದ್ದಾರೆ. ಜ್ಯೂಸ್‌ನ ಖಾಲಿ ಬಾಟ್ಲಿಗಳು ಮೇಜಿನ ಮೇಲೆ ಪತ್ತೆಯಾಗಿದೆ. ಪೊಲೀಸರು ತಲುಪಿ ಪರಿಶೀಲಿಸಿದ ಬಳಿಕವೇ ಇತರ ಅಂಗಡಿಗಳಿಂದ ಯಾವೆಲ್ಲ ಸಾಮಗ್ರಿಗಳು ಕಳವಿಗೀಡಾಗಿದೆಯೆಂದು ತಿಳಿಯಬಹುದಾಗಿದೆ.
ಹೊಸಂಗಡಿಯಲ್ಲಿ ಬೇಕರಿ ಕಳವು
ಮಂಜೇಶ್ವರ: ಎರಡು ತಿಂಗಳ ಹಿಂದೆಯಷ್ಟೇ ಕಳವು ನಡೆದ ಬೇಕರಿಗೆ ಮತ್ತೆ ಕಳ್ಳರು ನುಗ್ಗಿದ್ದಾರೆ. ಹೊಸಂಗಡಿಯಲ್ಲಿರುವ ಪೈವಳಿಕೆ ಟವರ್‌ನಲ್ಲಿ ಕಾರ್ಯಾಚರಿಸುವ ಪೊಸೋಟ್‌ನ ಸಿದ್ದಿಕ್‌ರ ಬೇಕರಿಗೆ ಕಳ್ಳರು ನುಗ್ಗಿದ್ದಾರೆ. ಇಂದು ಬೆಳಿಗ್ಗೆ ಸಿದ್ದಿಕ್ ಬೇಕರಿಗೆ ತಲುಪಿದಾಗ ಶರಟ್ ಅರ್ಧ ತೆರೆದಿಟ್ಟಿರುವುದು ಕಂಡುಬಂದಿದೆ. ಒಳಗೆ ಪರಿಶೀಲಿಸಿದಾಗ ಹಲವು ಸಾಮಗ್ರಿಗಳು ಕಳವಿಗೀಡಾದ ಬಗ್ಗೆ ತಿಳಿದುಬಂದಿದೆ. ಸುಮಾರು ೫೦ ಸಾವಿರ ರೂಪಾಯಿಗಳ ಸಾಮಗ್ರಿಗಳು ಕಳವಿಗೀಡಾಗಿರಬಹುದೆಂದು ಅಂದಾಜಿಸಲಾಗಿದೆ.