ನ್ಯಾಯವಾದಿ ಮನೆಯಿಂದ ಕಳವು: ರಿಮಾಂಡ್‌ನಲ್ಲಿರುವ ಆರೋಪಿಯನ್ನು ಕಸ್ಟಡಿಗೆ ತೆಗೆದು ತನಿಖೆಗೆ ಪೊಲೀಸ್ ನಿರ್ಧಾರ

ಕುಂಬಳೆ: ನಾಯ್ಕಾಪು ನಿವಾಸಿ ನ್ಯಾಯವಾದಿ ಚೈತ್ರಾರ ಮನೆಯಿಂದ ಚಿನ್ನ, ಬೆಳ್ಳಿ ಆಭರಣ ಹಾಗೂ ಹಣ ಕಳವು ನಡೆಸಿದ ಪ್ರಕರಣದಲ್ಲಿ ಸೆರೆಗೀಡಾಗಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಕಲಂದರ್ ಇಬ್ರಾಹಿಂ ಎಂಬಾತನನ್ನು ಕಸ್ಟಡಿಗೆ ತೆಗೆದು ಹೆಚ್ಚಿನ ತನಿಖೆ ನಡೆಸುವ ಅಗತ್ಯವಿದೆಯೆಂದು ಕುಂಬಳೆ ಪೊಲೀಸರು ತಿಳಿಸಿದ್ದಾರೆ. ಆದ್ದರಿಂದ ಆರೋಪಿಯನ್ನು ಕಸ್ಟಡಿಗೆ ತೆಗೆಯಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈ ಕಳವು ಪ್ರಕರಣದಲ್ಲಿ ಈತ ಮಾತ್ರವಲ್ಲದೆ ಬೇರೆ ಯಾರಾದರೂ ಶಾಮೀಲಾಗಿದ್ದಾರೆಯೇ ಎಂದು ತಿಳಿಯಬೇಕಾಗಿದೆ. ಅಲ್ಲದೆ ಮನೆಯಿಂದ ಕಳವು ನಡೆಸಿದ ಚಿನ್ನ, ಬೆಳ್ಳಿ ಆಭರಣಗಳನ್ನು ಪತ್ತೆಹಚ್ಚಿ ವಶಪಡಿಸಬೇಕಾಗಿದೆ. ಆದ್ದರಿಂದ ಆರೋಪಿಯನ್ನು ಸಮಗ್ರ ತನಿಖೆಗೊಳಪಡಿಸುವ ಅಗತ್ಯವಿದೆಯೆಂದು ಪೊಲೀಸರು ತಿಳಿಸಿದ್ದಾರೆ.

ಚೈತ್ರಾರ ಮನೆಯಿಂದ 29 ಪವನ್  ಚಿನ್ನಾಭರಣ, 25 ಸಾವಿರ ರೂಪಾಯಿಯ ಬೆಳ್ಳಿ ಆಭರಣಗಳು ಹಾಗೂ 5೦೦೦ ರೂಪಾಯಿ ಕಳವಿಗೀಡಾಗಿತ್ತು. ಈ ತಿಂಗಳ 18ರಂದು ಸಂಜೆ 6ರಿಂದ ರಾತ್ರಿ 8 ಗಂಟೆ ಮಧ್ಯೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಕಳವು ನಡೆದಿದೆ. ಕಳವಿಗೀಡಾದ ಚಿನ್ನದ ಪೈಕಿ ಅಲ್ಪ ಪ್ರಮಾಣವನ್ನು ಕರ್ನಾಟಕದ ಜ್ಯುವೆಲ್ಲರಿಯೊಂದರಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತ ಕಲಂದರ್ ಇಬ್ರಾಹಿಂ ಕಾಸರಗೋಡು, ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ವಿವಿಧೆಡೆ ಕ್ವಾರ್ಟರ್ಸ್‌ಗಳಲ್ಲಿ ವಾಸಿಸುತ್ತಿದ್ದನೆಂದು ತಿಳಿದುಬಂದಿದೆ. 

You cannot copy contents of this page