ಮಂಜೇಶ್ವರ: ಮಾದಕ ವಸ್ತುವಾದ ಎಂಡಿಎಂಎ ಸೇದುತ್ತಿದ್ದ ಓರ್ವೆ ಯುವತಿ ಹಾಗೂ ಇಬ್ಬರು ಯುವಕರನ್ನು ಮಂಜೇಶ್ವರ ಪೊಲೀಸರು ಸೆರೆ ಹಿಡಿದಿದ್ದಾರೆ. ಮಂಗಳೂರು ಸುರತ್ಕಲ್‌ನ ನಿಕೇತ್ ಸುರೇಶ್ (39), ಕುದ್ರೋಳಿಯ ಹುಸೈನ್ (34), ಕದ್ರಿಯ ಫಾತಿಮತ್ ಫೈರೋಸ್ ಪರ್ವಿನ್ (33) ಎಂಬಿವರು ಬಂಧಿತರಾದವರಾಗಿದ್ದಾರೆ. ಇವರು ನಿನ್ನೆ ಬೆಳಿಗ್ಗೆ ತೂಮಿನಾಡು ಹಿಲ್‌ಟಾಪ್ ನಗರದ ಖಾಸಗಿ ವ್ಯಕ್ತಿಯ ಹಿತ್ತಿಲಿನಲ್ಲಿ ಎಂಡಿಎಂಎ ಸೇದುತ್ತಿದ್ದರೆನ್ನಲಾಗಿದೆ. ಈ ಭಾಗದಲ್ಲಿ ನಿನ್ನೆ ಎಸ್‌ಐ ಅಜಯ್ ಎಸ್. ಮೆನೋನ್‌ರ ನೇತೃತ್ವದಲ್ಲಿ ಪೊಲೀಸರು ಗಸ್ತು ನಡೆಸುತ್ತಿದ್ದ ವೇಳೆ ಈ ಮೂರು ಮಂದಿ ಎಂಡಿಎಂಎ ಸೇದುತ್ತಿದ್ದುದು ಕಂಡು ಬಂದಿದೆ. ಮಾದಕವಸ್ತು ಸೇದಲು ಬಳಸುವ ಉಪಕರಣಗಳನ್ನು ಇವರ ಕೈಯಿಂದ ವಶಪಡಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.
