ಕಾಸರಗೋಡು: ಒಂದೇ ಕುಟುಂಬದ ಮೂರು ಮಂದಿ ಆಸಿಡ್ ಸೇವಿಸಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಅಂಬಲತ್ತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಒಬ್ಬರ ಸ್ಥಿತಿ ಅತೀ ಗಂಭೀರವಾಗಿದೆ ಎಂದು ಮಾಹಿತಿಯಿದೆ. ಅಂಬಲತ್ತರ ಪರಕ್ಕಳಾಯಿ ಒಂಡಂಪುಳಿಕ್ಕಾಲ್ ನಿವಾಸಿ ಗೋಪಿ (60), ಪತ್ನಿ ಇಂದಿರ (57), ಪುತ್ರ ರಾಜೇಶ್ (22) ಎಂಬಿವರು ಮೃತಪಟ್ಟ ವ್ಯಕ್ತಿಗಳಾಗಿದ್ದಾರೆ. ಇನ್ನೋರ್ವ ಪುತ್ರ ರಾಕೇಶ್‌ನನ್ನು ಗಂಭೀರ ಸ್ಥಿತಿಯಲ್ಲಿ ಪರಿಯಾರಂನ ಕಣ್ಣೂರು ಸರಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಇಂದು ಮುಂಜಾನೆ 4 ಗಂಟೆ ವೇಳೆಗೆ ಈ ಘಟನೆ ನಡೆದಿದೆ. ಆಸಿಡ್ ಸೇವಿಸಿ ಅತೀ ಗಂಭೀರ ಸ್ಥಿತಿಯಲ್ಲಿದ್ದ ನಾಲ್ಕು ಮಂದಿಯನ್ನು ಕೂಡಲೇ ಆಸ್ಪತ್ರೆಗೆ ಕೊಂ ಡೊಯ್ಯುತ್ತಿದ್ದ ದಾರಿ ಮಧ್ಯೆ ಮೂವರು ಮೃತಪಟ್ಟಿದ್ದಾರೆ. ಇದೊಂದು ಸಾಮೂಹಿಕ ಆತ್ಮ ಹತ್ಯೆಯಾಗಿದೆ ಎಂದೂ, ಆರ್ಥಿಕ ಸಂಧಿಗ್ದತೆಯೇ ಇದಕ್ಕೆ ಕಾರಣ ವೆಂಬುದಾಗಿ ಪೊಲೀಸರಿಗೆ ಲಭಿಸಿದ ಸೂಚನೆಯಾಗಿದೆ. ಇಬ್ಬರ ಮೃತದೇಹಗಳನ್ನು ಪರಿಯಾರಂನ ಮೆಡಿಕಲ್ ಕಾಲೇಜು ಆಸ್ಪತ್ರೆ ಶವಾಗಾರಕ್ಕೆ ತಲುಪಿಸಲಾಗಿದೆ. ಒಂದು ಮೃತದೇಹವನ್ನು ಕಾಞಂಗಾಡ್ ಜಿಲ್ಲಾ ಆಸ್ಪತ್ರೆ ಶವಾಗಾರದಲ್ಲಿರಿಸಲಾಗಿದೆ.