ಕೊಲ್ಲಂ: ಬಾವಿಗೆ ಹಾರಿದ ಯುವತಿಯನ್ನು ರಕ್ಷಿಸಲೆತ್ನಿಸಿದ ಸ್ನೇಹಿತ ಮತ್ತು ಅಗ್ನಿ ಶಾಮಕದಳದ ಸಿಬ್ಬಂದಿ, ಯುವತಿ ಸೇರಿದಂತೆ ಮೂವರು ದಾರುಣವಾಗಿ ಸಾವನ್ನಪ್ಪಿದ ಘಟನೆ ಕೊಲ್ಲಂನಲ್ಲಿ ನಡೆದಿದೆ. ಕೊಲ್ಲಂ ನೆಟ್ಟುವತ್ತೂರು ಪಂಚಾಯತ್‌ನ ಅನಕೋಟ್ಟೂರು ಪಡಿಞಾರ್ ಮುಂಡಪ್ಪಾರಕ್ಕಲ್ ವಿಷ್ಣು ವಿಲಾಸ್ ನಿವಾಸಿ ಅರ್ಚನ (33), ಆಕೆಯ ಜೊತೆ ವಾಸಿಸುತ್ತಿರುವ ಸ್ನೇಹಿತ ಕೊಡುಂಗಲ್ಲೂರು ನಿವಾಸಿ ಶಿವಕೃಷ್ಣನ್ (24) ಮತ್ತು ಅವರನ್ನು ರಕ್ಷಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದ ಕೊಟ್ಟಾರಕ್ಕರ ಅಗ್ನಿಶಾಮಕದಳದ ಸಿಬ್ಬಂದಿ ಅಟ್ಟಿಂಗಾಲ್ ಇಳಮ್ಮತ್ತಿಲ್ ಸೋನಿ ಎಸ್. ಕುಮಾರ್ (36) ಸಾವನ್ನಪ್ಪಿದ ದುರ್ದೈವಿಗಳು.
ಅರ್ಚನ ನಿನ್ನೆ ತಡರಾತ್ರಿ ಆಕೆಯ ಮನೆ ಪಕ್ಕದ 80 ಅಡಿ ಆಳದ ಬಾವಿಗೆ ಹಾರಿದ್ದ್ದಳು. ಅದನ್ನು ಕಂಡ ಸ್ನೇಹಿತ ಶಿವಕೃಷ್ಣನ್ ಆಕೆಯನ್ನು ರಕ್ಷಿಸಲು ತಕ್ಷಣ ಬಾವಿಗೆ ಹಾರಿದ್ದಾನೆ. ಆದರೆ ಅರ್ಚನಾಳನ್ನು ರಕ್ಷಿಸಲು ಆತನಿಗೆ ಸಾಧ್ಯವಾಗಲಿಲ್ಲ. ತಕ್ಷಣ ನೆರೆಮನೆಯವರು ನೀಡಿದ ಮಾಹಿತಿಯಂತೆ ಕೊಟ್ಟಾರಕ್ಕರ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದೆ. ಅಗ್ನಿಶಾಮಕದಳದ ಸಿಬ್ಬಂದಿ ಸೋನಿ ಎಸ್. ಕುಮಾರ್ ಹಗ್ಗದ ಸಹಾಯದಿಂದ ಬಾವಿಗಿಳಿದು ಅರ್ಚನಾಳನ್ನು ಮೇಲಕ್ಕೆತ್ತುವ ವೇಳೆ ಬಾವಿಯೊಳಗೆ ಸಿಲುಕಿಕೊಂಡಿದ್ದ ಶಿವಕೃಷ್ಣನ್‌ರ ಮೇಲೆ ಬಿದ್ದಿದ್ದು, ಇದರಿಂದ ಮೂವರೂ ಅಲ್ಲೇ ಸಾವನ್ನಪ್ಪಿದರು. ಬಳಿಕ ಅಗ್ನಿಶಾಮಕ ದಳದವರು ಮೂವರ ಮೃತದೇಹಗಳನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸಿದರು.
ಇಬ್ಬರು ಮಕ್ಕಳ ತಾಯಿ ಯಾಗಿರುವ ಮೃತ ಅರ್ಚನ ಹೋಮ್ ನರ್ಸ್ ಆಗಿದ್ದು, ಅವರು ಕೆಲವು ದಿನಗಳಿಂದ ಶಿವಕೃಷ್ಣನ್ ಜತೆಗೆ ವಾಸಿಸುತ್ತಿದ್ದಳು. ನಿನ್ನೆ ತಡರಾತ್ರಿ ಅವರಿಬ್ಬರ ನಡುವೆ ವಾಗ್ವಾದ ಉಂಟಾಯಿತೆಂದೂ ಅದುವೇ ಆಕೆ ಬಾವಿಗೆ ಜಿಗಿಯಲು ಕಾರಣವೆಂದು ಹೇಳಲಾಗುತ್ತಿದೆ.