ಪೊಲೀಸರನ್ನು ಕಂಡು ಪರಾರಿಯಾಗಲೆತ್ನಿಸಿದ ಕಾರಿನಲ್ಲಿ ತಂಬಾಕು ಉತ್ಪನ್ನ ಪತ್ತೆ: ಓರ್ವ ಸೆರೆ

ಕಾಸರಗೋಡು:  ಕಾರಿನಲ್ಲಿ ಸಾಗಿಸುತ್ತಿದ್ದ ಕೇರಳದಲ್ಲಿ ನಿಷೇಧ ಹೇರಲಾಗಿರುವ ತಂಬಾಕು ಉತ್ಪನ್ನಗಳನ್ನು ಕಾಸರಗೋಡು ಪೊಲೀಸರು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿ ಮಧೂರು ಹಿದಾಯತ್ ನಗರ ಚೆಟ್ಟುಂಗುಳಿಯ ರಾಶೀದ್ (32) ಎಂಬಾತನನ್ನು ಪೊಲೀಸರು ಕಾರು ಸಹಿತ ಸೆರೆ ಹಿಡಿದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೊಗ್ರಾಲ್ ಪುತ್ತೂರು ಚೌಕಿ ಕುನ್ನಿಲ್‌ನಲ್ಲಿ ಕಾಸರಗೋಡು ಪೊಲೀಸ್ ಠಾಣೆಯ ಎಸ್‌ಐ ವಿ.ವಿ. ಸುರೇಶ್ ಕುಮಾರ್‌ರ ನೇತೃತ್ವದ ಪೊಲೀಸರ ತಂಡ ವಾಹನ ತಪಾಸಣೆಯಲ್ಲಿ ತೊಡಗಿದಾಗ ಆ ವೇಳೆ ಚೌಕಿಯಿಂದ ಕಂಬಾರಿನತ್ತ ಹೋಗುತ್ತಿದ್ದ ಕಾರು ಪೊಲೀಸರನ್ನು ಕಂಡಾಕ್ಷಣ ಅಲ್ಲಿಂದ ಹಿಂದಕ್ಕೆ ಸರಿಯಲೆತ್ನಿಸಿದಾಗ ಅದನ್ನು ಗಮನಿಸಿ ಶಂಕೆಗೊಂಡ ಪೊಲೀಸರು ಆ ಕಾರನ್ನು ತಡೆದು ನಿಲ್ಲಿಸಿ ತಪಾಸಣೆಗೊಳಪಡಿಸಿದಾಗ ಅದರಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿಟ್ಟ ೨೧೦ ಪ್ಯಾಕೆಟ್ ತಂಬಾಕು ಉತ್ಪನ್ನ ಪತ್ತೆಯಾಗಿದೆ. ತಕ್ಷಣ ಆ ಕಾರನ್ನು ಚಲಾಯಿಸುತ್ತಿದ್ದ ರಾಶೀದ್‌ನ ಸಹಿತ ಕಾರು ಮತ್ತು ಮಾಲನ್ನು ಪೊಲೀಸರು ವಶಕ್ಕೆ ತೆಗೆದು ಪೊಲೀಸ್ ಠಾಣೆಗೆ ಸಾಗಿಸಿ ಪ್ರಕರಣ ದಾಖಲಿಸಿಕೊಂಡರು. ವಿದ್ಯಾರ್ಥಿಗಳಿಗೆ ಮಾರಾಟ ಮಾಡಲೆಂದು ಈ ಮಾಲನ್ನು ಸಾಗಿಸಲಾಗುತ್ತಿತ್ತೆಂದು ಪೊಲೀಸರು ತಿಳಿಸಿದ್ದಾರೆ. ಈ ಕಾರ್ಯಾಚರಣೆ ನಡೆಸಿದ ಪೊಲೀಸರ ತಂಡದಲ್ಲಿ ಸಿಪಿಒ ಕೆ.ವಿ. ರಜೀಶ್ ಮತ್ತು ಬಿನು ಎಂಬವರು ಒಳಗೊಂಡಿದ್ದಾರೆ.

You cannot copy contents of this page