ಕುಂಬಳೆ: ರಾಷ್ಟ್ರೀಯ ಹೆದ್ದಾರಿಯ ಕುಂಬಳೆ ಆರಿಕ್ಕಾಡಿಯಲ್ಲಿ ಟೋಲ್ ಬೂತ್ ನಿರ್ಮಿಸುವುದರ ವಿರುದ್ಧ ಕ್ರಿಯಾ ಸಮಿತಿ ಮಾರ್ಚ್ ನಡೆಸಿತು. ಕುಂಬಳೆ -ಬದಿಯಡ್ಕ ರಸ್ತೆಯಿಂದ ಆರಂಭಿಸಿದ ಬಹುಜನ ಮಾರ್ಚನ್ನು ಪಂಚಾಯತ್ ಅಧ್ಯಕ್ಷೆ ಯು.ಪಿ. ತಾಹಿರ ಉದ್ಘಾಟಿಸಿದರು. ರಘುದೇವನ್ ಮಾಸ್ತರ್, ಪುತ್ತಿಗೆ ಪಂ. ಅಧ್ಯಕ್ಷ ಸುಬ್ಬಣ್ಣ ಆಳ್ವ, ಕುಂಬಳೆ ಪಂ. ಉಪಾಧ್ಯಕ್ಷ ನಾಸರ್ ಮೊಗ್ರಾಲ್ ಮೊದಲಾದವರು ಮಾತನಾಡಿದರು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾರಿಗೆ ಸಂಚಾರಕ್ಕೆ ತಡೆ ಸೃಷ್ಟಿಸಿರುವುದಕ್ಕೆ ಮುಷ್ಕರ ಸಮಿತಿ ಮುಖಂಡರು, ವಿವಿಧ ಪಕ್ಷಗಳ ಪದಾಧಿಕಾರಿಗಳು ಸಹಿತ ೧೦ ಮಂದಿ ವಿರುದ್ಧ ಪೊಲೀಸರು ಕೇಸು ದಾಖಲಿಸಿ ದರು. ವಿವಿಧ ಪಕ್ಷಗಳ, ವ್ಯಾಪಾರಿ ಸಂಘಟನೆಗಳ, ಸಾರ್ವಜನಿಕರ ಸಹಕಾರದಲ್ಲಿ ಮಾರ್ಚ್ ನಡೆಸಲಾಗಿತ್ತು. ಎ.ಕೆ. ಆರೀಫ್, ಸಿ.ಎ. ಸುಬೈರ್, ಅಶ್ರಫ್ ಕಾರ್ಳೆ, ಅನ್ವರ್, ಲಕ್ಷ್ಮಣ ಪ್ರಭು ನೇತೃತ್ವ ನೀಡಿದರು. ಮುಷ್ಕರನಿರತರು ಟೋಲ್ ಬೂತ್ ನಿರ್ಮಾಣಕ್ಕೆ ತಡೆಯೊಡ್ಡಿದರೆ ಅವರನ್ನು ಎದುರಿಸಲು ಪೊಲೀಸರನ್ನು ಸ್ಥಳದಲ್ಲಿ ಕಾವಲು ಏರ್ಪಡಿಸಲಾಗಿದೆ. ಟೋಲ್ ಬೂತ್ ನಿರ್ಮಾಣವಾದರೆ ಮಂಗಳೂರಿಗೆ ತೆರಳಬೇಕಾದ ಸಾಮಾನ್ಯ ಜನರಿಗೆ ಉಂಟಾಗಬಹುದಾದ ಸಮಸ್ಯೆಗಳ ಬಗ್ಗೆ ಮಾರ್ಚ್‌ನಲ್ಲಿ ಹಾಗೂ ಬಳಿಕ ನಡೆದ ಪ್ರತಿಭಟನಾ ಸಭೆಯಲ್ಲಿ ಮುಖಂಡರು ಮಾತನಾಡಿದರು.