ಕಾಸರಗೋಡು: ತೆರಿಗೆ ವಂಚಿಸಿ ವಿದೇಶ ನಿರ್ಮಿತ ಆಡಂಬರ ಕಾರುಗಳನ್ನು ಸಾಗಾಟ ನಡೆಸಿದ ಪ್ರಕರಣದ ತನಿಖೆಗಾಗಿ ಎನ್‌ಐಎ ಕಾಸರ ಗೋಡಿಗೂ ಬರಲಿದೆ. ಕಾರು ಸಾಗಿಸಿದ ತಂಡದಲ್ಲಿ ಕಾಸರಗೋಡು ನಿವಾಸಿಯಾದ ಓರ್ವ ಇದ್ದಾನೆಂಬ ಸೂಚನೆಗಳ ಹಿನ್ನೆಲೆಯಲ್ಲಿ ಎನ್‌ಐಎ ಇಲ್ಲಿಗೆ ಬರಲಿದೆಯೆಂದು ತಿಳಿದುಬಂದಿದೆ. ಕಾಸರಗೋಡು ನಿವಾಸಿ ಮಲಪ್ಪುರಂ ಕೇಂದ್ರೀಕರಿಸಿ ಕಾರ್ಯಾ ಚರಿಸುವ ಸಂಘದ ಸದಸ್ಯನಾಗಿದ್ದಾನೆಂದು ಹೇಳಲಾಗುತ್ತಿದೆ. ಪ್ರಸ್ತುತ ವ್ಯಕ್ತಿಯ ಕುರಿತು ಹೆಚ್ಚಿನ ಮಾಹಿತಿಗಳನ್ನು ಬಹಿರಂಗಪಡಿಸಿಲ್ಲ. ‘ಆಪರೇಶನ್ ನುಂಖೂರ್’ ಎಂಬ ಹೆಸರಲ್ಲಿ ಕಸ್ಟಮ್ಸ್ ಇತ್ತೀಚೆಗೆ ನಡೆಸಿದ ತನಿಖೆಯಲ್ಲಿ ತೆರಿಗೆ ವಂಚಿಸಿ ನೇಪಾಳ ಮೂಲಕ ತರಲಾದ ಆಡಂಬರ ಕಾರುಗಳು ಕೇರಳಕ್ಕೂ ತಲುಪಿರುವುದಾಗಿ ಪತ್ತೆಹಚ್ಚಲಾಗಿತ್ತು. ಸಿನಿಮಾ ನಟರಾದ ದುಲ್ಕರ್ ಸಲ್ಮಾನ್, ಪೃಥ್ವೀರಾಜ್ ಸಹಿತ ಸೆಲೆಬ್ರಿಟಿಗಳ ಮನೆಯಲ್ಲಿ ನಡೆಸಿದ ತಪಾಸಣೆ ವೇಳೆ ಎರಡಕ್ಕಿಂತ ಹೆಚ್ಚು ಕಾರುಗಳನ್ನು ಪತ್ತೆಹಚ್ಚಲಾಗಿತ್ತು. ನೇಪಾಳದಿಂದ ತೆರಿಗೆ ವಂಚಿಸಿ ಕೇರಳಕ್ಕೆ ೨೦೦ರಷ್ಟು ವಾಹನಗಳನ್ನು ಸಾಗಿಸಲಾಗಿದೆಯೆಂದು ಕಸ್ಟಮ್ಸ್ ಅಂದಾಜಿಸಿದೆ. ಇವುಗಳ ಪೈಕಿ ಕೆಲವು ವಾಹನಗಳನ್ನು ಮಾತ್ರವೇ ಇದುವರೆಗೆ ಪತ್ತೆಹಚ್ಚಲಾಗಿದೆ. ಬಾಕಿ ವಾಹನಗಳು ರಾಜ್ಯದ ಹೊರಗಿರುವುದಾಗಿ ಸಂಶಯಿಸಲಾಗಿದೆ. ಇದರ ಆಧಾರದಲ್ಲಿ ತನಿಖೆಯನ್ನು ಬೆಂಗಳೂರು, ಚೆನ್ನೈ ಎಂಬಿಡೆಗಳಿಗೂ ವಿಸ್ತರಿಸಲು ತನಿಖಾ ತಂಡ ನಿರ್ಧರಿಸಿದೆ. ಇದಕ್ಕಾಗಿ ಕರ್ನಾಟಕ, ತಮಿಳುನಾಡು ಪೊಲೀಸರ ಸಹಾಯವನ್ನು ಯಾಚಿಸುವುದಾಗಿ ಮಾಹಿತಿಯಿದೆ.
