ಮಂಗಳೂರು: ಕಾಸರಗೋಡು ನಿವಾಸಿಯೂ, ಮಂಗಳೂರಿನಲ್ಲಿ ವಾಸಿಸುವ ಯುವಕನನ್ನು ತಂಡವೊಂದು ಹನಿಟ್ರ್ಯಾಪ್‌ನಲ್ಲಿ ಸಿಲುಕಿಸಿ 75 ಸಾವಿರ ರೂಪಾಯಿ ಅಪಹರಿಸಿದ ಬಳಿಕ ಆತನ ಕೈಕಾಲುಗಳನ್ನು ಕಟ್ಟಿಹಾಕಿ ಹಲ್ಲೆಗೈದು ಗಂಭೀರ ಗಾಯಗೊಳಿಸಿದ ಬಗ್ಗೆ ದೂರಲಾಗಿದೆ. ಘಟನೆಗೆ ಸಂಬಂಧಿಸಿ ಯುವತಿ ಸಹಿತ 6 ಮಂದಿಯನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ. ನಾವುಂದ ಬಡಾಕೆರೆಯ ಅಬ್ದುಲ್ ಸವಾದ್ ಯಾನೆ ಅಚ್ಚು (28), ಗುಲ್ವಾಡಿ ಬೋಳ್ಕಟ್ಟೆಯ ಸೈಫುಲ್ಲ (38), ಹಂಗಳೂರಿನ ಮೊಹಮ್ಮದ್ ನಾಸಿರ್ ಶರೀಫ್ (38), ಮೂಡುಗೋಪಾಡಿಯ ಅಬ್ದುಲ್ ಸತ್ತಾರ್ (23), ನಾಗೋಡಿಯ ಅಬ್ದುಲ್‌ಅಜೀಜ್ (26) ಹಾಗೂ ಎಂಕೋಡಿಯ ಅಸ್ಮ (43) ಎಂಬಿವರು ಬಂಧಿತ ಆರೋಪಿಗಳಾಗಿದ್ದಾರೆ. ಘಟನೆಗೆ ಸಂಬಂಧಿಸಿ ಎರಡು ಕಾರುಗಳನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.
ಕಾಸರಗೋಡು ನಿವಾಸಿಯೂ ಮಂಗಳೂರಿನಲ್ಲಿ ವಾಸಿಸುವ ಸಂದೀಪ್ ಕುಮಾರ್ (37) ಎಂಬವರನ್ನು ಆರೋಪಿಗಳು ಹಲ್ಲೆಗೈದು ಹಣ ಅಪಹರಿಸಿದ್ದಾರೆನ್ನಲಾಗಿದೆ. ಈ ತಿಂಗಳ 2ರಂದು ಘಟನೆ ನಡೆದಿದೆ. ದೂರುದಾರ 3 ತಿಂಗಳಹಿಂದೆ ಕುಂದಾಪುರಕ್ಕೆ ತಲುಪಿದಾಗ ಪ್ರಕರಣದ ಆರೋಪಿಯಾದ ಅಬ್ದುಲ್ ಸವಾದ್ ಯಾನೆ ಅಚ್ಚುವನ್ನು ಪರಿಚಯಗೊಂಡಿದ್ದರು. ಈತನ ಮೂಲಕ ಅಸ್ಮಾ ಎಂಬಾಕೆಯನ್ನು ಸಂದೀಪ್ ಕುಮಾರ್ ಪರಿಚಯಗೊಂಡಿದ್ದರೆನ್ನ ಲಾಗಿದೆ. ಮಂಗಳವಾರ ದೂರುಗಾರನಿಗೆ ಫೋನ್ ಕರೆ ಮಾಡಿದ ಅಸ್ಮಾ ಅಂದು ಸಂಜೆ ಕೋಟೇಶ್ವರಕ್ಕೆ ಬರುವಂತೆ ತಿಳಿಸಿದ್ದಳ. ಇದರಂತೆ ಅಲ್ಲಿಗೆ ತೆರಳಿದ ಸಂದೀಪ್‌ರನ್ನು ಅಸ್ಮಾ ಆಟೋ ರಿಕ್ಷಾದಲ್ಲಿ ಮೂಡುಗೋಪಾಡಿಯಲ್ಲಿರುವ ತನ್ನ ಬಾಡಿಗೆ ಮನೆಗೆ ಕರೆದುಕೊಂಡು ಹೋಗಿದ್ದಾಳೆ. ಈ ವೇಳೆ ಅಸ್ಮಾ ಅಲ್ಲಿಗೆ ಇತರ ಆರೋಪಿಗಳನ್ನು ಕರೆಸಿದ್ದಾಳೆ. ಮುಹಮ್ಮದ್ ನಾಸಿರ್ ಶರೀಫ್ ಚಾಕು ತೋರಿಸಿ ಸಂದೀಪ್ ಕುಮಾರ್‌ಗೆ ಬೆದರಿಕೆಯೊಡ್ಡಿ 3 ಲಕ್ಷ ರೂ. ನೀಡಬೇಕೆಂದು ತಿಳಿಸಿದ್ದಾನೆ. ಈ ವೇಳ ಅಲ್ಲಿಂದ ಓಡಿ ಪರಾರಿಯಾಗಲೆತ್ನಿದ ಸಂದೀಪ್‌ರನ್ನು ಇತರ ಆರೋಪಿಗಳು ಸೆರೆಹಿಡಿದು ಹಗ್ಗದಲ್ಲಿ ಕೈಕಾಲುಗಳನ್ನು ಕಟ್ಟಿಹಾಕಿ ಹಲ್ಲೆಗೈದಿದ್ದಾರೆ. ಬಳಿಕ ಸಂದೀಪ್‌ರ ಜೇಬಿನಲ್ಲಿದ್ದ 6200 ರೂ.ವನ್ನು ವಶಪಡಿಸಿಕೊಂಡಿದ್ದಾರೆ. ಬಾಕಿ ಮೊತ್ತವನ್ನು ಗೂಗಲ್ ಪೇ ಮೂಲಕ ನೀಡುವಂತೆ ತಂಡ ಒತ್ತಾಯಿಸಿದೆ. ಇದರಂತೆ ಎರಡು ಬಾರಿಯಾಗಿ 30 ಸಾವಿರ ರೂಪಾಯಿಗಳನ್ನು ವಶಪಡಿಸಿಕೊಂಡ ತಂಡ ಬಳಿಕ ಎಟಿಎಂ ಕಾರ್ಡ್ ಹಾಗೂ ಪಿನ್ ನಂಬ್ರ ಪಡೆದು 40 ಸಾವಿರ ರೂ.ಗಳನ್ನು ಲಪಟಾಯಿಸಿದೆ. ಅನಂತರ ರಾತ್ರಿ 11.30ರ ವೇಳೆ ಸಂದೀಪ್‌ರನ್ನು ತಂಡ ಬಿಡು ಗಡೆಗೊಳಿಸಿದೆ. ಅಲ್ಲಿಂದ ಮರಳಿದ ಸಂದೀಪ್ ಕುಮಾರ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಕೂಡಲೇ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.