ಕುಂಬಳೆ ಪೇಟೆಯಲ್ಲಿ ಪ್ರಯೋಗಾರ್ಥ ಟ್ರಾಫಿಕ್ ಪರಿಷ್ಕರಣೆ ಸೋಮವಾರದಿಂದ ಜ್ಯಾರಿಗೆ

ಕುಂಬಳೆ: ಕುಂಬಳೆ ಪೇಟೆಯಲ್ಲಿ ಸೃಷ್ಟಿಯಾ ಗುತ್ತಿರುವ ಸಾರಿಗೆ ಅಡಚಣೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ನೂತನ ವ್ಯವಸ್ಥೆಗಳೊಂದಿಗೆ ಜ್ಯಾರಿಗೊಳಿಸುವ ಟ್ರಾಫಿಕ್ ಪರಿಷ್ಕರಣೆ ಸೋಮವಾರದಿಂದ ಜ್ಯಾರಿಗೆ ಬರಲಿದೆ. ಸೋಮವಾರದಿಂದ ಅಕ್ಟೋಬರ್ ೧೬ರವರೆಗೆ ಪ್ರಯೋಗಾರ್ಥವಾಗಿ ಇದು ಜ್ಯಾರಿಯಲ್ಲಿರುವುದು. ಇದು ಯಶಸ್ವಿಯಾದಲ್ಲಿ ಇದನ್ನೇ ಶಾಶ್ವತವಾಗಿ ಮುಂದುವರಿಸಲಾಗು ವುದು. ಇದೇ ವೇಳೆ ಟ್ರಾಫಿಕ್ ಪರಿಷ್ಕರಣೆಯನ್ನು ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

ಪರಿಷ್ಕರಣೆಯ ವ್ಯವಸ್ಥೆಗಳು ಈ ಕೆಳಗಿನಂತಿವೆ

ಆಟೋ ಸ್ಟಾಂಡ್ ಆಗಿ ನಿರ್ಧರಿಸಲಾದ ಸ್ಥಳಗಳು: 1. ಪ್ರಕಾಶ್ ಮೆಡಿಕಲ್‌ನಿಂದ ಒಬರ್ಲೆ ಕಾಂಪ್ಲೆಕ್ಸ್ ಸಮೀಪದ ಟ್ರಾನ್ಸ್‌ಫಾರ್ಮರ್‌ವರೆಗೆ, 2. ಕುಂಬಳೆ ಪೊಲೀಸ್ ಠಾಣೆ ರಸ್ತೆಯ ಎಡ ಭಾಗದಲ್ಲಿ ಮೀನು ಮಾರ್ಕೆಟ್ ರಸ್ತೆಯಿಂದ ಕೆಳಗಿನವರೆಗೆ, 3. ಜಿಲ್ಲಾ ಸಹಕಾರಿ ಆಸ್ಪತ್ರೆ ಸಮೀಪ ಪ್ರಸ್ತುತ ಪಾರ್ಕಿಂಗ್‌ಗಾಗಿ ಉಪಯೋಗಿಸುವ ಸ್ಥಳ, 4. ಡಾಕ್ಟರ್ಸ್ ಆಸ್ಪತ್ರೆ ಸಮೀಪ ಪ್ರಸ್ತುತ ಪಾರ್ಕಿಂಗ್‌ಗೆ ಉಪಯೋಗಿಸುವ ಸ್ಥಳ, 5. ಕಮ್ಯೂನಿಟಿ ಹೆಲ್ತ್ ಸೆಂಟರ್ ಸಮೀಪ ಪ್ರಸ್ತುತ ಪಾರ್ಕಿಂಗ್‌ಗೆ ಉಪಯೋಗಿಸುವ ಸ್ಥಳ.

ಉಳಿದಂತೆ ಟ್ಯಾಕ್ಸಿ ಕಾರು, ಜೀಪುಗಳನ್ನು  ಸೈಗಂ ಕಾಂಪ್ಲೆಕ್ಸ್‌ನ ಮುಂಭಾಗ ನಿಲ್ಲಿಸಬೇಕಾಗಿದೆ. ಸಣ್ಣ ಗೂಡ್ಸ್ ವಾಹನಗಳನ್ನು ಒಬರ್ಲೆ ಕಾಂಪ್ಲೆಕ್ಸ್‌ನ ಕೊಟ್ಟೂಡಲ್ ಹಾರ್ಡ್‌ವೇರ್ಸ್ ಶಾಪ್‌ನ ಮುಂಭಾಗದಲ್ಲಿ ನಿಲ್ಲಿಸಬೇಕು. ಬಸ್‌ಗಳನ್ನು ನಿಲ್ಲಿಸಲಿರುವ ನಿರ್ದೇಶಗಳು: ಆರಿಕ್ಕಾಡಿ, ಬಂಬ್ರಾಣ, ಬಾಯಿಕಟ್ಟೆ, ಕಳತ್ತೂರು ಭಾಗಕ್ಕೆ ಹೋಗುವ ವಾಹನಗಳನ್ನು ಪೇಟೆಯ ಪ್ರಸ್ತುತ ಕೆಎಸ್‌ಟಿಪಿ ಬಸ್ ಶೆಲ್ಟರ್ ವೇ 1ರಲ್ಲಿ ನಿಲ್ಲಿಸಬೇಕು. ಬಂದ್ಯೋಡು, ಉಪ್ಪಳ, ತಲಪ್ಪಾಡಿ ಭಾಗಕ್ಕೆ ಹೋಗುವ ಬಸ್‌ಗಳನ್ನು ಮಹೇಶ್ ಇಲೆಕ್ಟ್ರೋನಿಕ್ಸ್‌ನ ಮುಂಭಾಗ ವೇ 2ರಲ್ಲಿ, ಮಂಗಳೂರು ಭಾಗಕ್ಕೆ ಹೋಗುವ ಬಸ್‌ಗಳು (ಕೆಎಸ್‌ಆರ್‌ಟಿಸಿ) ಸುಲಭ ಶಾಪ್‌ನ ಮುಂಭಾಗ ವೇ 3ರಲ್ಲಿ, ಕಾಸರಗೋಡು ಭಾಗಕ್ಕೆ ಹೋಗುವ ಬಸ್‌ಗಳನ್ನು ಕೆನರಾ ಬ್ಯಾಂಕ್‌ನ ಮುಂಭಾಗ ವೇ ೪ರಲ್ಲಿ, ಕಾಸರಗೋಡು ಭಾಗಕ್ಕೆ ಹೋಗುವ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಜೀವನ್‌ರೇಖಾ ಮೆಡಿಕಲ್‌ನ ಮುಂಭಾಗ ವೇ ೫ರಲ್ಲಿ, ಪೇರಾಲ್ ಕಣ್ಣೂರು, ಪೆರ್ಲ, ಬದಿಯಡ್ಕ, ಮುಳ್ಳೇರಿಯ, ಸುಳ್ಯ ಭಾಗಕ್ಕೆ ಹೋಗುವ ಬಸ್‌ಗಳನ್ನು ಕೆಎಸ್‌ಟಿಪಿ ನೂತನವಾಗಿ ನಿರ್ಮಿಸಿದ ಬಸ್ ಶೆಲ್ಟರ್ ವೇ 6ರಲ್ಲಿ ನಿಲ್ಲಿಸಬೇಕು. ಖಾಸಗಿ ವಾಹನಗಳನ್ನು ಪೊಲೀಸ್ ಠಾಣೆ ರಸ್ತೆಯ ಬಲ ಭಾಗದಲ್ಲಿ, ಶಾಲಾ ರಸ್ತೆ, ಓಲ್ಡ್ ಎಕ್ಸ್‌ಚೇಂಜ್ ರೋಡ್, ಟೇಕ್ ಎ ಬ್ರೇಕ್ ಪರಿಸರದಲ್ಲಿ ನಿಲ್ಲಿಸಬೇಕಾಗಿದೆ.

ಇದೇ ವೇಳೆ ಕುಂಬಳೆ ಪೇಟೆಯ ಆಟೋರಿಕ್ಷಾ ಕಾರ್ಮಿಕರ ಮಾಹಿತಿಗಳನ್ನು ಸಂಗ್ರಹಿಸಲು ಹಾಗೂ ರಿಜಿಸ್ಟ್ರೇಷನ್‌ನ ಅಂಗವಾಗಿ ಆಟೋರಿಕ್ಷಾ ಕಾರ್ಮಿಕರಿಗೆ ಐಡಿ ಕಾರ್ಡ್ ನೀಡಲು ನಿರ್ಧರಿಸಲಾಗಿದೆ. ಆಟೋ ರಿಕ್ಷಾಗಳು ಸಹಿತ ವಾಹನಗಳನ್ನು ವ್ಯಾಪಾರ ಸಂಸ್ಥೆಗಳಿಗೆ ತೊಂದರೆ ಉಂಟಾಗುವ ರೀತಿಯಲ್ಲಿ ಹಾಗೂ ಪಾರ್ಕಿಂಗ್‌ಗೆ ನಿಗದಿಪಡಿಸಿದ ಸ್ಥಳದ ಹೊರತು ಇತರೆಡೆ  ನಿಲ್ಲಿಸುವುದನ್ನು ಪೂರ್ಣವಾಗಿ ನಿಷೇಧಿಸಲಾಗಿದೆ.

ಪಾರ್ಕಿಂಗ್ ವ್ಯವಸ್ಥೆಗೆ ಸಂಬಂಧಿಸಿ ಬಸ್, ಆಟೋರಿಕ್ಷಾ, ಟ್ಯಾಕ್ಸಿ, ಗೂಡ್ಸ್ ಕಾರ್ಮಿಕರ ಯೂನಿಯನ್ ಪ್ರತಿನಿಧಿಗಳು, ವ್ಯಾಪಾರಿ ವ್ಯವಸಾಯಿ, ಹೋಟೆಲ್ ರೆಸ್ಟೋರೆಂಟ್ ಯೂನಿಯನ್ ಪ್ರತಿನಿಧಿಗಳು, ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಜನಪ್ರತಿನಿಧಿಗಳು ಎಂಬಿವರನ್ನು ಒಳಗೊಂಡ ಸಭೆಯಲ್ಲಿ  ನಿರ್ಧರಿಸಲಾಗಿದೆ. ಟ್ರಾಫಿಕ್ ಪರಿಷ್ಕರಣೆಗೆ ಸರ್ವರ ಸಹಕಾರ ಅಗತ್ಯವಿದೆ ಎಂದು ಪಂಚಾಯತ್ ಅಧ್ಯಕ್ಷೆ ಯು.ಪಿ. ತಾಹಿರ, ಪ್ರಭಾರ ಕಾರ್ಯದರ್ಶಿ ಶೈಜು, ಕುಂಬಳೆ ಸರ್ಕಲ್ ಇನ್ಸ್‌ಪೆಕ್ಟರ್ ಜಿಜೀಶ್ ಪಿ.ಕೆ. ವಿನಂತಿಸಿದ್ದಾರೆ.

RELATED NEWS

You cannot copy contents of this page