ಪೈವಳಿಕೆ: ಕಳೆದ ಬಾರಿ ಟಾಸ್ ಮೂಲಕ ಆಡಳಿತ ಲಭಿಸಿ ಎಡರಂಗದ ಆಡಳಿತವಿರುವ ಪೈವಳಿಕೆ ಪಂಚಾಯತ್‌ನಲ್ಲಿ ಈ ಬಾರಿ ತೀವ್ರ ಹೋರಾಟ ಕಂಡು ಬರುತ್ತಿದೆ. ಕಳೆದ ಬಾರಿ 19 ವಾರ್ಡ್‌ಗಳಿದ್ದ ಪಂಚಾಯತ್‌ನಲ್ಲಿ ಈ ಬಾರಿ 21 ವಾರ್ಡ್‌ಗಳಿದ್ದು, ಆಡಳಿತ ಯಾವ ಪಕ್ಷಕ್ಕೆ ಲಭಿಸುತ್ತದೆ ಎಂಬ ನಿರೀಕ್ಷೆ ಜನರಲ್ಲಿದೆ. ತ್ರಿಕೋನ ಸ್ಪರ್ಧೆ ನಡೆಯುತ್ತಿರುವ ಇಲ್ಲಿ ಬಿಜೆಪಿ ತಾವರೆ ಚಿಹ್ನೆಯಲ್ಲಿಯೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಆದರೆ ಎಡರಂಗ ಹಾಗೂ ಯುಡಿಎಫ್ ಪಕ್ಷಗಳಲ್ಲಿ ಕೆಲವು ಕಡೆ ಸ್ವತಂತ್ರ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.
ಪ್ರಸ್ತುತ ಪಂಚಾಯತ್‌ನಲ್ಲಿ 8 ಬಿಜೆಪಿ, 7 ಸಿಪಿಎಂ, 2 ಲೀಗ್, ತಲಾ 1ರಂತೆ ಕಾಂಗ್ರೆಸ್ ಹಾಗೂ ಸಿಪಿಐ ಸದಸ್ಯರಿದ್ದಾರೆ. ಅತೀ ಹೆಚ್ಚು ಸ್ಥಾನ ಬಿಜೆಪಿಗೆ ಕಳೆದ ಬಾರಿ ಲಭಿಸಿದ್ದರೂ ಬಹುಮತ ಲಭಿಸದ ಕಾರಣ ಟಾಸ್ ಮೂಲಕ ಆಡಳಿತವನ್ನು ಆಯ್ಕೆ ಮಾಡಲಾಗಿತ್ತು. ಅದರಂತೆ ಎಡರಂಗದ ಜಯಂತಿ ಕೆ. ಅಧ್ಯಕ್ಷೆಯಾಗಿಯೂ, ಬಿಜೆಪಿಯ ಪುಷ್ಪಲಕ್ಷ್ಮಿ ಉಪಾಧ್ಯಕ್ಷೆಯಾಗಿಯೂ ಆಯ್ಕೆಯಾಗಿದ್ದರು. ಉಳಿದ ಸ್ಥಾಯಿ ಸಮಿತಿಗಳಿಗೆ ವಿವಿಧ ಪಕ್ಷಗಳ ಮುಖಂಡರು ಆಯ್ಕೆಯಾಗಿದ್ದಾರೆ. ಈ ಬಾರಿ ಹೆಚ್ಚು ವಾರ್ಡ್‌ಗಳಲ್ಲಿ ಜಯಗಳಿಸಿ ಆಡಳಿತವನ್ನು ಸ್ವಾಧೀನ ಮಾಡಬೇಕೆಂಬ ಉತ್ಸಾಹದಲ್ಲಿ ಬಿಜೆಪಿ ಕಾರ್ಯಾಚರಿಸುತ್ತಿದೆ. ಅದೇ ರೀತಿ ಎಡರಂಗ ಹಾಗೂ ಯುಡಿಎಫ್ ಕೂಡಾ ತೀವ್ರ ಪೈಪೋಟಿ ನೀಡುತ್ತಿದೆ. ಈ ಬಾರಿ ಕೊಕ್ಕೆಚ್ಚಾಲ್, ಅಟ್ಟೆಗೋಳಿ ಎಂಬ ಎರಡು ವಾರ್ಡ್‌ಗಳು ಹೆಚ್ಚಾಗಿ ಸೇರ್ಪಡೆಗೊಂಡಿದ್ದು, ಇದು ಕೂಡಾ ಆಡಳಿತದಲ್ಲಿ ನಿರ್ಣಾಯಕವಾಗಲಿದೆ.







