ಕಾಸರಗೋಡು: ತೃಕ್ಕರಿಪುರ ರೈಲು ನಿಲ್ದಾಣ ಪರಿಸರದಲ್ಲಿ ನಿಲ್ಲಿಸಿದ್ದ ಪೊಲೀಸ್ ಅಧಿಕಾರಿಯ ಕಾರಿನ ಗಾಜು ಪುಡಿಗೈದು ಬ್ಯಾಟರಿ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದೆ. ಪಿಲಿಕ್ಕೋಡ್ ಮೇಲ್ಮಟ್ಟಲಾಯಿ ನಿವಾಸಿಗಳಾದ ಕೆ. ರೋಬಿನ್ ಯಾನೆ ಸಚ್ಚು (20), ಎ.ಶಾನಿಲ್ (28) ಬಂಧಿತ ವ್ಯಕ್ತಿಗಳಾಗಿದ್ದಾರೆ. ಕಾಸರಗೋಡು ರೈಲ್ವೇ ಪೊಲೀಸ್ ಠಾಣೆಯ ಸಿವಿಲ್ ಪೊಲೀಸ್ ಆಫೀಸರ್ ಶಂಸೀರ್‌ರ ಕಾರಿನ ಗಾಜು ಪುಡಿಗೈದು ಆರೋಪಿಗಳು ಬ್ಯಾಟರಿ ಕಳವು ನಡೆಸಿದ್ದರು. ಶಂಸೀರ್ ಕಾರನ್ನು ತೃಕ್ಕರಿಪುರ ರೈಲು ನಿಲ್ದಾಣ ಪರಿಸರದಲ್ಲಿ ನಿಲ್ಲಿಸಿ ಕರ್ತವ್ಯಕ್ಕೆ ತೆರಳಿದ್ದರು. ಕೆಲಸ ಮುಗಿಸಿ ಮರಳಿ ತಲುಪಿದಾಗಲೇ ಕಾರನ್ನು ಹಾನಿಗೈದ ಸ್ಥಿತಿಯಲ್ಲಿ ಕಂಡುಬಂದಿದೆ. ಈ ಬಗ್ಗೆ ಶಂಸೀರ್ ನೀಡಿದ ದೂರಿನಂತೆ ಕೇಸು ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಘಟನೆ ಸ್ಥಳದ ಸಿಸಿ ಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಆರೋಪಿಗಳ ಗುರುತು ಪತ್ತೆಹಚ್ಚಲಾಗಿತ್ತು. ಚಂದೇರ ಎಸ್‌ಐ ಪಿ.ವಿ. ರಘುನಾಥ್‌ರ ನೇತೃತ್ವದಲ್ಲಿ ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್‌ಗಳಾದ ಸಜಿತ್ ಪಡನ್ನ, ಹರೀಶ್ ಕುಮಾರ್, ಶೈಜು ಎಂಬಿವರನ್ನೊಳಗೊಂಡ ತಂಡ ರೈಲ್ವೇ ಪೊಲೀಸರ ಸಹಾಯದೊಂದಿಗೆ ಆರೋಪಿಗಳನ್ನು ಬಂಧಿಸಿದೆ.





