ಪತ್ತನಂತಿಟ್ಟ: ಶಬರಿಮಲೆ ಕ್ಷೇತ್ರ ದರ್ಶನಕ್ಕೆ ತಲುಪಿದ ಕಾಸರಗೋಡು ನಿವಾಸಿಗಳಾದ ಅಯ್ಯಪ್ಪ ಭಕ್ತರನ್ನು ವಂಚಿಸಿ ಹಣ ಲಪಟಾಯಿಸಿದ ಪ್ರಕರಣದಲ್ಲಿ ಇಬ್ಬರು ಡೋಲಿ ಕಾರ್ಮಿಕರನ್ನು ಪಂಪಾ ಪೊಲೀಸರು ಬಂಧಿಸಿದ್ದಾರೆ. ಇಡುಕ್ಕಿ ಪೀರುಮೇಡ್ ರಾಣಿಕೋವಿಲ್ ಎಸ್ಟೇಟ್ ನಿವಾಸಿಗಳಾದ ಕಣ್ಣನ್ (31), ರಘು ಆರ್. (27) ಎಂಬಿವರು ಬಂಧಿತ ಆರೋಪಿಗಳಾಗಿದ್ದಾರೆ. ಅಕ್ಟೋಬರ್ 18ರಂದು ಘಟನೆ ನಡೆದಿದೆ. ತುಲಾ ಮಾಸ ಪೂಜೆಗಾಗಿ ಶಬರಿಮಲೆ ಕ್ಷೇತ್ರ ದರ್ಶನಕ್ಕೆ ತಲುಪಿದ ಕಾಸರಗೋಡು ನಿವಾಸಿಗಳು ಒಳಗೊಂಡ ತಂಡವನ್ನು ಆರೋಪಿಗಳು ವಂಚಿಸಿದ್ದಾರೆ. ಮಧ್ಯಾಹ್ನ 12 ಗಂಟೆ ವೇಳೆ ಭಕ್ತರ ಸಂದಣಿ ಹೆಚ್ಚಿರುವ ಸಮಯದಲ್ಲಿ ತಲುಪಿದ ಕಾಸರಗೋಡು ನಿವಾಸಿಗಳನ್ನು ಡೋಲಿ ಕಾರ್ಮಿಕರಾದ ಆರೋಪಿಗಳು ಸಮೀಪಿಸಿದ್ದಾರೆ. ಹೆಚ್ಚು ಸಮಯ ಕ್ಯೂ ನಿಲ್ಲದೆ ಕ್ಷೇತ್ರ ದರ್ಶನ ನಡೆಸಲು ಸೌಕರ್ಯ ಒದಗಿಸುವುದಾಗಿ ನಂಬಿಸಿ ಕಾಸರಗೋಡು ನಿವಾಸಿಗಳಿಂದ 10 ಸಾವಿರ ರೂಪಾಯಿಗಳನ್ನು ಆರೋಪಿಗಳು ಪಡೆದುಕೊಂಡಿದ್ದರು. ಬಳಿಕ ತೀರ್ಥಾಟಕರನ್ನು ವಾವರ ನಡೆ ಸಮೀಪಕ್ಕೆ ತಲುಪಿಸಿದ ಬಳಿಕ ಆರೋಪಿಗಳು ಪರಾರಿಯಾಗಿದ್ದಾರೆ. ತಾವು ವಂಚಿತರಾಗಿದ್ದೇವೆಯೆಂದು ಗಮನಕ್ಕೆ ಬಂದ ತೀರ್ಥಾಟಕರು ದೇವಸ್ವಂ ಮಂಡಳಿಗೆ ದೂರು ನೀಡಿದ್ದರು. ಈ ಬಗ್ಗೆ ತಿರುವಿದಾಂಕೂರು ದೇವಸ್ವಂ ವಿಜಿಲೆನ್ಸ್ ಪ್ರಾಥಮಿಕ ತನಿಖೆ ನಡೆಸಿ ವರದಿ ಸಲ್ಲಿಸಿದೆ. ಸೆರೆಗೀಡಾದ ಡೋಲಿ ಕಾರ್ಮಿಕರ ಪರ್ಮಿಟ್ ರದ್ದುಗೊಳಿಸಲು ದೇವಸ್ವಂ ಮಂಡಳಿಗೆ ಪೊಲೀಸರು ಪತ್ರ ಬರೆದಿದ್ದಾರೆ. ಹೆಚ್ಚು ಭಕ್ತರ ಸಂದಣಿಯುಳ್ಳ ಸಮಯದಲ್ಲಿ ಡೋಲಿ ಕಾರ್ಮಿಕರು ಹಣ ಪಡೆದು ಸರದಿಯಲ್ಲಿ ನಿಲ್ಲದೆ ಭಕ್ತರನ್ನು ದರ್ಶನಕ್ಕೆ ಕರೆದೊಯ್ಯುತ್ತಿರುವ ಬಗ್ಗೆ ಈ ಹಿಂದೆಯೂ ಆರೋಪ ಕೇಳಿ ಬಂದಿತ್ತು.

 
								 
															





