ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲಿಸಿದ್ದ ಲಾರಿಯ ಹಿಂಭಾಗಕ್ಕೆ ಬೈಕ್ ಢಿಕ್ಕಿ ಹೊಡೆದು ಬೈಕ್ ಸವಾರರಿಬ್ಬರು ಸಾವನ್ನಪ್ಪಿದ ದಾರುಣ ಘಟನೆ ನಿನ್ನೆ ರಾತ್ರಿ ನಡೆದಿದೆ. ನೀಲೇಶ್ವರ ಪಡಿಞ್ಞಾಟಂ ಕೊಳವಲ್ ನಿವಾಸಿಗಳಾದ ಕಲ್ಲಾಳಿ ವೀಟಿಲ್ ಮನೋಜ್ ಕುಮಾರ್ ಎಂಬವರ ಪುತ್ರ ಅನುರಾಗ್ ಮನೋಜ್ (24) ಪುಳಿಚ್ಚೆರಂ ವೀಟಿಲ್ ವೇಣು ಗೋಪಾಲ್ ಎಂಬವರ ಪುತ್ರ ಆನಂದ ಕೃಷ್ಣನ್ (24) ಎಂಬವರು ಸಾವನ್ನಪ್ಪಿದ ದುರ್ದೈವಿಗಳು.
ಇವರಿಬ್ಬರು ಹೊಸದುರ್ಗ ತೆರುವತ್ ಅರೆಯಿಲ್ ಭಗವತಿ ಕ್ಷೇತ್ರದಲ್ಲಿ ನಡೆಯುತ್ತಿರುವ ದೈವ ಕೋಲ ಉತ್ಸವದಲ್ಲಿ ಭಾಗವಹಿಸಲೆಂದು ಬೈಕ್‌ನಲ್ಲಿ ನಿನ್ನೆ ರಾತ್ರಿ ಸುಮಾರು 10.30ರ ವೇಳೆ ನೀಲೇಶ್ವರದಿಂದ ಹೋಗುತ್ತಿದ್ದಾಗ ಪಡನ್ನಕ್ಕಾಡ್ ನೆಹರೂ ಕಾಲೇಜ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲಿಸಿದ್ದ ಲಾರಿಯ ಹಿಂಬದಿಗೆ ಬೈಕ್ ಢಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ಅವರಿಬ್ಬರನ್ನೂ ತಕ್ಷಣ ಕಾಞಂಗಾಡ್‌ನ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಮೃತರ ಪೈಕಿ ಅನುರಾಗ್ ನೀಲೇಶ್ವರದ ಹೋಟೆಲೊಂದರಲ್ಲಿ ಕ್ಯಾಶರ್ ಆಗಿ ದುಡಿಯುತ್ತಿದ್ದನು. ಮೃತದೇಹಗಳನ್ನು ನಂತರ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೊಳಪಡಿಸಲಾಯಿತು. ಲಾರಿ ಚಾಲಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಲಾರಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.






