ಕುಂಬಳೆ: ಜನಸಾಮಾನ್ಯರೊಂದಿಗೆ ಪೊಲೀಸರು ಗೂಂಡಾಗಳಂತೆ ವರ್ತಿಸುತ್ತಿದ್ದಾರೆ. ಇಂತಹ ನೀತಿಯನ್ನು ಪೊಲೀಸರು ಕೊನೆಗೊಳಿಸಬೇಕೆಂದು ಕೆಪಿಸಿಸಿ ಕಾರ್ಯದರ್ಶಿ ಬಿ. ಸುಬ್ಬಯ್ಯ ರೈ ತಿಳಿಸಿದ್ದಾರೆ. ಪೊಲೀಸರು ಅಕ್ರಮಣ ನೀತಿಯನ್ನು ವಿರೋಧಿಸಿ ಯುಡಿಎಫ್ ಮಂಜೇಶ್ವರ ಮಂಡಲ ಸಮಿತಿ ನೇತೃತ್ವದಲ್ಲಿ ನಿನ್ನೆ ಕುಂಬಳೆ ಪೊಲೀಸ್ ಠಾಣೆ ಮುಂದೆ ನಡೆದ ಪ್ರತಿಭಟನಾ ಧರಣಿಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕುಂಬಳೆ ಟೋಲ್ ಗೇಟ್‌ನಲ್ಲಿ ಮೊನ್ನೆ ಕಾರುಚಾಲಕನನ್ನು ಪೊಲೀಸರು ಬಲಪ್ರಯೋಗಿಸಿ ಕಾರಿನಿಂದಿಳಿಸಿ, ಪುಟ್ಟಮಕ್ಕಳು ದೀರ್ಘ ಹೊತ್ತು ರಸ್ತೆಯಲ್ಲೇ ಉಳಿಯಬೇಕಾದ ಸ್ಥಿತಿಯನ್ನು ಪ್ರತಿಭಟಿಸಿ ಯುಡಿಎಫ್ ನಿನ್ನೆ ಧರಣಿ ಹಮ್ಮಿಕೊಂಡಿತ್ತು. ಕಾರ್ಯಕ್ರಮದಲ್ಲಿ ಅಸೀಸ್ ಮರಿಕೆ ಅಧ್ಯಕ್ಷತೆ ವಹಿಸಿದರು. ಮಂಜುನಾಥ ಆಳ್ವ ಸ್ವಾಗತಿಸಿದರು. ನೇತಾರರಾದ ಸೈಫುಲ್ಲಾ ತಂಙಳ್, ಎ.ಕೆ.ಆರೀಫ್, ಅಶ್ರಫ್ ಕಾರ್ಳೆ, ಸೋಮಶೇಖರ್ ಜೆ.ಎಸ್, ಪೃಥ್ವಿರಾಜ್, ವಿ.ಪಿ. ಅಬ್ದುಲ್ ಖಾದರ್ ಹಾಜಿ, ಇ.ಕೆ. ಮೊಹಮ್ಮದ್ ಕುಂಞಿ, ಲಕ್ಷ್ಮಣ ಪ್ರಭು ಮೊದಲಾದವರು ನೇತೃತ್ವ ನೀಡಿದರು.






