ಕುಂಬಳೆ ಪೇಟೆಯಲ್ಲಿ ಅನಧಿಕೃತ ಕಟ್ಟಡ ನಿರ್ಮಾಣ: ವಿಜಿಲೆನ್ಸ್‌ನಿಂದ ತನಿಖೆ

ಕುಂಬಳೆ: ಕುಂಬಳೆ ಪೇಟೆಯಲ್ಲಿ ಅನಧಿಕೃತ ಕಟ್ಟಡ ನಿರ್ಮಾಣ ಹಾಗೂ ಅದಕ್ಕೆ ಪಂಚಾಯತ್ ಆಡಳಿತ ಸಮಿತಿ ಒತ್ತಾಸೆ ನೀಡುತ್ತಿದೆ ಎಂಬ ಆರೋಪದ ಕುರಿತು ವಿಜಿಲೆನ್ಸ್ ತನಿಖೆ ಆರಂಭಗೊಂಡಿದೆ. ವಿಜಿಲೆನ್ಸ್ ಡಿವೈಎಸ್‌ಪಿ ನೇತೃತ್ವದಲ್ಲಿ ಪಂಚಾಯತ್ ಕಚೇರಿಗೆ ತಲುಪಿದ ವಿಜಿಲೆನ್ಸ್ ತಂಡ ಕಟ್ಟಡನಿರ್ಮಾಣ ಹಾಗೂ ಅದಕ್ಕೆ ಪಂಚಾಯತ್ ನೀಡಿದ ಅನುಮತಿಯ ಕುರಿತಾದ ಕಡತಗಳನ್ನು ಪರಿಶೀಲಿಸಿದೆ. ಮಾತ್ರವಲ್ಲದೆ ಹೆಚ್ಚಿನ ತನಿಖೆಗೆ ಅಗತ್ಯವುಳ್ಳ ಕಡತಗಳನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಆರೋಪಕ್ಕೆಡೆಯಾದ ಕುಂಬಳೆ ಪೇಟೆಯ ಕೆಲವು ಕಟ್ಟಡಗಳನ್ನು ಅಳತೆ ಮಾಡಿ ವಿಜಿಲೆನ್ಸ್ ತಂಡ ಪರಿಶೀಲಿಸಿದೆ.

ಕುಂಬಳೆ ಪಂಚಾಯತ್ ಅನಧಿಕೃತ ಕಟ್ಟಡಗಳ ನಿರ್ಮಾಣಕ್ಕೆ ಅನುಮತಿ ನೀಡುತ್ತಿದೆ ಎಂದೂ, ಈ ರೀತಿಯಲ್ಲಿ ನಿರ್ಮಿಸುವ ಕಟ್ಟಡಗಳಿಗೆ ನಿರ್ಮಾಣ ಪೂರ್ತಿಗೊಂಡ ಕಂಪ್ಲೀಶನ್ ಸರ್ಟಿಫಿಕೆಟ್ ಹಾಗೂ ಕಟ್ಟಡ ನಂಬ್ರಗಳನ್ನು ನೀಡುತ್ತಿದೆ. ಈ ಮೂಲಕ ಪಂಚಾಯತ್ ಕಟ್ಟಡ ನಿರ್ಮಾಣ ಕಾಯ್ದೆಗಳನ್ನು ಪೂರ್ಣವಾಗಿ ಉಲ್ಲಂಘಿಸುತ್ತಿದೆ ಎಂದು ಆರೋಪಿಸಿ ಕುಂಬಳೆಯ ಉದ್ಯಮಿ ವಿಕ್ರಂ ಪೈ ನೀಡಿದ ದೂರಿನ ಹಿನ್ನೆಲೆಯಲ್ಲಿ ವಿಜಿಲೆನ್ಸ್ ತಂಡ ಪರಿಶೀಲನೆ ನಡೆಸುತ್ತಿದೆ. ಇತ್ತೀಚೆಗೆ ವಿವಾದಕ್ಕೆಡೆಯಾದ ಕುಂಬಳೆ ಮರ್ಚೆಂಟ್ಸ್ ವೆಲ್ಫೇರ್ ಸಹಕಾರಿ ಸಂಘದ ಕಚೇರಿಯನ್ನು ಈ ರೀತಿಯ ಕಟ್ಟಡಕ್ಕೆ ಸ್ಥಳಾಂತರಿಸುವ ಸಂಬಂಧ ಆರೋಪಗಳು, ದೂರುಗಳು ವಿಜಿಲೆನ್ಸ್ ತನಿಖೆಗೆ ದಾರಿ ಮಾಡಿಕೊಟ್ಟಿದೆ. ಕುಂಬಳೆ ಪೇಟೆಯಲ್ಲಿ 16 ಸೆಂಟ್ಸ್ ಸ್ಥಳದಲ್ಲಿ 653 ಚದರ ಮೀಟರ್‌ನಲ್ಲಿ ಎರಡು ಅಂತಸ್ತಿನ ಕಟ್ಟಡ ನಿರ್ಮಿಸಲು 2016ರಲ್ಲಿ ಕುಂಬಳೆ ಪಂಚಾಯತ್ ಆಡಳಿತ ಸಮಿತಿ ಅನುಮತಿ ನೀಡಿತ್ತು. ಈ ಅನುಮತಿಯ ಬಲದಲ್ಲಿ ಅದೇ ಸ್ಥಳದಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ನಿರ್ಮಿಸಲಾಯಿತು. 2200 ಚದರ ಮೀಟರ್ ವಿಸ್ತೀರ್ಣದಲ್ಲಿ  ನಿರ್ಮಿಸಿದ ಕಟ್ಟಡಕ್ಕೆ ಮರ್ಚೆಂಟ್ಸ್ ವೆಲ್ಫೇರ್ ಸಹಕಾರಿ ಸಂಘವನ್ನು ಸ್ಥಳಾಂತರಿಸಲಾಗಿದೆ. ಆದರೆ ಈ ಕುರಿತಾದ ಬಾಡಿಗೆ ಒಪ್ಪಂದದಲ್ಲಿ ಎಷ್ಟು ಚದರ ಅಡಿ ಸ್ಥಳ ಸಂಘವನ್ನು ಬಾಡಿಗೆಗೆ ನೀಡಲಾಗಿದೆ ಎಂದು ಸ್ಪಷ್ಟಪಡಿಸದಿರು ವುದು ವ್ಯಾಪಾರಿಗಳ ಮಧ್ಯೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿತ್ತು. ಮಾತ್ರವಲ್ಲ 653 ಚದರ ಮೀಟರ್ ಕಟ್ಟಡ ಎರಡಂತಸ್ತಿನಲ್ಲಿ ನಿರ್ಮಿಸಲು ಅನುಮತಿ ನೀಡಲಾಗಿದೆಯಾದರೂ ಕಟ್ಟಡದ ಕಾಮಗಾರಿ ಪೂರ್ಣಗೊಂಡಾಗ ಅದು ನಾಲ್ಕು ಅಂತಸ್ತಿನ ಕಟ್ಟಡವಾಯಿತು.

4ನೇ ಅಂತಸ್ತಿನ ಹಾಲ್‌ಗೆ ಮಾತ್ರ 8000 ಚದರ ಅಡಿ ವಿಸ್ತೀರ್ಣ ಇರುವುದಾಗಿಯೂ ಆರೋಪವುಂಟಾ ಗಿತ್ತು. ಮಾತ್ರವಲ್ಲ ಕಟ್ಟಡದ ಕೊಠಡಿಗಳಿಗೆ ಹಾಗೂ ಹಾಲ್‌ಗೆ ಪಂಚಾಯತ್ ಡೋರ್ ನಂಬರ್ ನೀಡಿದೆ ಎಂದು ಆರೋಪವುಂಟಾಗಿತ್ತು. ಪಂಚಾಯತ್‌ನ ವಿವಿಧ ಭಾಗಗಳಲ್ಲಿ ಹಲವು ಕಟ್ಟಡಗಳು ಕಟ್ಟಡ ನಿರ್ಮಾಣ ಕಾಯ್ದೆಯನ್ನು ಉಲ್ಲಂಘಿಸಿ ನಿರ್ಮಿಸಲಾಗಿದೆ ಎಂದು ವ್ಯಾಪಕ ಆರೋಪಗಳಿವೆ. ಆ ಕುರಿತಾಗಿ ತನಿಖೆ ನಡೆಯಲಿದೆ ಎಂಬ ಸೂಚನೆಯಿದೆ.

You cannot copy contents of this page