ಆರ್‌ಪಿಎಫ್ ಅಧಿಕಾರಿಗೆ ಬಡಿದು, ಕಚ್ಚಿ ಹಲ್ಲೆ: ಉಪ್ಪಳ ರೈಲ್ವೇ ಗೇಟ್ ಕೀಪರ್ ಸೆರೆ

ಕಾಸರಗೋಡು: ರೈಲ್ವೇ ಪೊಲೀಸ್ ಉದ್ಯೋಗಸ್ಥನನ್ನು ಬಡಿದು, ಕಚ್ಚಿ ಗಾಯಗೊಳಿಸಿದ ಉಪ್ಪಳ ರೈಲ್ವೇ ಗೇಟ್ ಕೀಪರ್ ಕಣ್ಣೂರು ಮಂಬರ ನಿವಾಸಿ ಧನೇಶ್ (42) ಸೆರೆಯಾಗಿದ್ದಾನೆ. ಕಣ್ಣೂರು ರೈಲ್ವೇ ಪೊಲೀಸರು ಈತನನ್ನು ಬಂಧಿಸಿದ್ದಾರೆ. ನಿನ್ನೆ ರಾತ್ರಿ 11.45ರ ವೇಳೆ ಆರ್‌ಪಿಎಫ್ ಉದ್ಯೋಗಸ್ಥನಾದ ಎಡಪ್ಪಾಲ್ ವಟ್ಟಕ್ಕುಳಂ ನಿವಾಸಿ ಪಿ. ಶಶಿಧರನ್ (53)ನನ್ನು ಆಕ್ರಮಿಸಿದ ಪ್ರಕರಣದಲ್ಲಿ ಬಂಧಿಸಲಾಗಿದೆ. ಕಣ್ಣೂರು  ರೈಲ್ವೇ ನಿಲ್ದಾಣದ ಪ್ಲಾಟ್ ಫಾಂನಲ್ಲಿ ಶಶಿಧರನ್ ಕರ್ತವ್ಯ ನಿರತರಾಗಿದ್ದರು. ಈ ಮಧ್ಯೆ ಪ್ಲಾಟ್ ಫಾಂನಲ್ಲಿ ಧನೇಶ್ ನಿದ್ದೆ ಮಾಡುತ್ತಿರುವುದು ಕಂಡುಬಂದಿದೆ. ಬಳಿಕ ಆತನನ್ನು ಎಬ್ಬಿಸಲಾಯಿತು. ಇದರ  ದ್ವೇಷದಿಂದ ಮಹಿಳಾ ವಿಶ್ರಾಂತಿ ಕೊಠಡಿಯ ಮುಂಭಾಗದಲ್ಲಿ ಅಸಭ್ಯ ಭಾಷೆಯಲ್ಲಿ  ಬೈದು ಸಮವಸ್ತ್ರದ ಕಾಲರ್ ಹಿಡಿದು ಹಲ್ಲೆಗೈದು ಕಚ್ಚಿ ಗಾಯಗೊಳಿಸಿರುವುದಾಗಿಯೂ  15 ಸಾವಿರ ರೂ. ಮೌಲ್ಯದ ಕ್ಯಾಮರಾವನ್ನು ನಾಶಪಡಿಸಿರುವುದಾಗಿಯೂ, ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿರುವುದಾಗಿಯೂ ಪೊಲೀಸರು ನೋಂದಾಯಿಸಿದ ಪ್ರಕರಣದಲ್ಲಿ ತಿಳಿಸಲಾಗಿದೆ. ಆಕ್ರಮಣಕ್ಕೆ ತುತ್ತಾದ ಶಶಿಧರನನ್ನು ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

You cannot copy contents of this page