ತಿರುವನಂತಪುರ: ತೆರಿಗೆ ವಂಚನೆ ನಡೆಸಿ ಭೂತಾನ್‌ನಿಂದ ಭಾರತಕ್ಕೆ ವಾಹನ ಕಳ್ಳ ಸಾಗಾಟ ನಡೆಸಿದ ಪ್ರಕರಣದ ತನಿಖೆಯನ್ನು ಕಸ್ಟಮ್ಸ್ ಮಾತ್ರವಲ್ಲ ಎನ್‌ಫೋರ್ಸ್‌ಮೆಂಟ್ ಡೈರೆಕ್ಟರೇಟ್ (ಇ.ಡಿ) ಮತ್ತು ಜಿಎಸ್‌ಟಿ ಇಲಾಖೆಯೂ ಇನ್ನೊಂದೆಡೆ ಸಮಗ್ರ ತನಿಖೆ ಆರಂಭಿಸಿದೆ. ಭೂತಾನ್ ಸೇನಾಪಡೆಯಿಂದ ಪಡೆದ ಆಡಂಭರ ವಾಹನಗಳಿಗೆ ಭಾರತೀಯ ಸೇನಾಪ ಡೆಯ ನಕಲಿ ದಾಖಲುಪತ್ರಗಳನ್ನು ಸೃಷ್ಟಿಸಿ ಅವುಗಳನ್ನು ಮಾರಾಟಮಾಡುವ ಜಾಲವೊಂದು ಹಿಮಾಚಲಪ್ರದೇಶವನ್ನು ಕೇಂದ್ರೀಕರಿಸಿ ಕಾರ್ಯವೆಸಗುತ್ತಿದೆ ಎಂಬ ಗುಪ್ತ ಮಾಹಿತಿ ಕೇಂದ್ರ ಗುಪ್ತಚರ ವಿಭಾಗಕ್ಕೂ ಲಭಿಸಿದೆ. ಇಂತಹ ವಾಹನಗಳನ್ನು ವಿವಿಧ ರಾಜ್ಯಗಳಿಗೆ ಸಾಗಿಸಿ ಅಲ್ಲಿ ಅವುಗಳನ್ನು ಮಾರಾಟ ಮಾಡುತ್ತಿದೆ. ಇಂತಹ ವಾಹನಗಳಿಗೆ ಭಾರತೀಯ ರಾಯಭಾರಿ ಕೇಂದ್ರಗಳ ನಕಲಿ ದಾಖಲುಪತ್ರಗಳನ್ನು ಉಪಯೋಗಿಸಲಾಗುತ್ತಿದೆ. ಈ ವಿಷಯವನ್ನು ಕೇಂದ್ರ ವಿದೇಶಾಂಗ ಸಚಿವಾಲಯದ ಗಮನಕ್ಕೂ ತರಲಾಗುವುದೆಂದು ಪ್ರಸ್ತುತ ತನಿಖೆ ನಡೆಸುತ್ತಿರುವ ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
ಹೀಗೆ ನಕಲಿ ದಾಖಲು ಪತ್ರಗಳನ್ನು ಉಪಯೋಗಿಸಿ ಅಂತಹ ವಾಹನಗಳನ್ನು ನೋಂದಾವಣೆ ನಡೆಸಿದ ಬಗ್ಗೆ ಸಂಬಂಧಪಟ್ಟ ರಾಜ್ಯಗಳ ಪೊಲೀಸರು ಮತ್ತು ಸಾರಿಗೆ ಇಲಾಖೆಯು ಸಮಗ್ರ ತನಿಖೆ ನಡೆಸಿ ಅಂತಹ ವಾಹನಗಳ ನೋಂದಾವಣೆಯನ್ನು ರದ್ದು ಪಡಿಸಬೇಕೆಂದೂ ಕಸ್ಟಮ್ಸ್ ತಿಳಿಸಿದೆ. ತೆರಿಗೆ ವಂಚನೆ ನಡೆಸಿ ಭೂತಾನ್‌ನಿಂದ ಕೇರಳಕ್ಕೆ 200ರಷ್ಟು ವಾಹನಗಳ ಕಳ್ಳಸಾಗಾಟ ನಡೆಸಲಾಗಿದೆ ಎಂಬ ಸ್ಪಷ್ಟ ಮಾಹಿತಿ ಕಸ್ಟಮ್ಸ್‌ಗೆ ಲಭಿಸಿದೆ.
ಮಲೆಯಾಳಂ ಸಿನೆಮಾ ನಟರಾದ ದುಲ್ಕರ್ ಸಲ್ಮಾನ್, ಪೃಥ್ವಿರಾಜ್ ಮತ್ತು ಅಮಿತ್ ಚಕ್ಕಾಲೈಕಲ್ ಕೂಡಾ ಇಂತಹ ಆಡಂಭರ ವಾಹನಗಳನ್ನು ಖರೀದಿಸಿದ್ದಾರೆಂದು ತನಿಖೆಯಲ್ಲಿ ಸ್ಪಷ್ಟಗೊಂಡಿದೆ. ಆ ಹಿನ್ನೆಲೆಯಲ್ಲಿ ಈ ಸಿನಿಮಾ ನಟರೂ ಸೇರಿದಂತೆ ಇಂತಹ ವಾಹನಗಳನ್ನು ಖರೀದಿಸಿದ ಎಲ್ಲರ ಮನೆಗಳಿಗೂ ಕಸ್ಟಮ್ಸ್ ನಿನ್ನೆಯಿಂದ ವ್ಯಾಪಕ ದಾಳಿ ಮತ್ತು ತಪಾಸಣೆ ಆರಂಭಿಸಿದೆ. ಮಾತ್ರವಲ್ಲ ನಟ ದುಲ್ಕರ್ ಸಲ್ಮಾನ್‌ರ ಮನೆಯಿಂದ ಎರಡು ಆಡಂಭರ ವಾಹನಗಳನ್ನು ಕಸ್ಟಮ್ಸ್ ವಶಕ್ಕೆ ತೆಗೆದುಕೊಂಡಿದೆ. ಮಾತ್ರವಲ್ಲ ಅವರ ತಂದೆ ನಟ ಮಮ್ಮುಟ್ಟಿಯ ಮನೆಯಲ್ಲೂ ನಿನ್ನೆ ಕಸ್ಟಮ್ಸ್ ತಪಾಸಣೆ ನಡೆಸಿದೆ.
ನಟ ದುಲ್ಕರ್ ಸಲ್ಮಾನ್‌ಗೆ ಈ ವಿಷಯದಲ್ಲಿ ಕಸ್ಟಮ್ಸ್ ನೋಟೀಸ್ ಜ್ಯಾರಿಗೊಳಿಸಿದೆ. ತೆರಿಗೆ ವಂಚನೆ ನಡೆಸಿದ ಬಗ್ಗೆ ಸರಕು ಸೇವಾ ತೆರಿಗೆ (ಜಿಎಸ್‌ಟಿ) ಕಳ್ಳಸಾಗಾಟ ನಡೆಸಿದ ಬಗ್ಗೆ ಜ್ಯಾರಿ ನಿರ್ದೇಶನಾಲಯ (ಇಡಿ) ಇಲಾಖೆಯೂ ಇನ್ನೊಂದೆಡೆ ಸಮಾನಾಂ ತರ ತನಿಖೆ ಆರಂಭಿಸಿದೆ.