ಉಪ್ಪಳ: ರಸ್ತೆ ಬದಿಯಲ್ಲಿ ತ್ಯಾಜ್ಯ ಉಪೇಕ್ಷಿಸುತ್ತಿರುವ ಕೃತ್ಯ ಮತ್ತೆ ವ್ಯಾಪಕಗೊಂಡಿದ್ದು, ಸಂಚಾರಕ್ಕೆ ಸಮಸ್ಯೆಯಾಗಿದೆ. ತ್ಯಾಜ್ಯ ಎಸೆಯುವವರ ವಿರುದ್ದ ಕಠಿಣ ಕ್ರಮಕ್ಕೆ ಊರವರು ಒತ್ತಾಯಿಸಿದ್ದಾರೆ. ಶಾಂತಿಗುರಿ-ಕುಬಣೂರು ರಸ್ತೆಯ ವಿವಿಧೆಡೆಗಳಲ್ಲಿ ತ್ಯಾಜ್ಯ ದುರ್ವಾಸನೆ ಬೀರುತ್ತಿದ್ದು, ಪಾದಚಾರಿಗಳು ಹಾಗೂ ವಾಹನ ಸವಾರರಿಗೆ ಸಮಸ್ಯೆಯಾಗಿದೆ. ರಾತ್ರಿ ವಾಹನ ಸಂಚಾರದ ವೇಳೆ ಇಲ್ಲಿ ಪ್ಲಾಸ್ಟಿಕ್ ಸಹಿತ ವಿವಿಧ ರೀತಿಯ ತ್ಯಾಜ್ಯವನ್ನು ಎಸೆಯಲಾಗುತ್ತಿರುವುದಾಗಿ ದೂರಲಾಗಿದೆ. ಹಲವು ವರ್ಷಗಳ ಹಿಂದೆ ಈ ಪರಿಸರದ ಸುವರ್ಣಗಿರಿ ಹೊಳೆಗೆ ಮದುವೆ ಸಮಾರಂಭದ ಅವಶಿಷ್ಠಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿ ಎಸೆಯಲಾಗಿದ್ದು, ಇದನ್ನು ಊರವರು ಪ್ರತಿಭಟಿಸಿದ್ದರು. ಇದೀಗ ರಸ್ತೆ ಬದಿಯಲ್ಲಿ ಎಸೆಯುತ್ತಿರುವುದು ಸ್ಥಳೀಯರಲ್ಲಿ ಸಮಸ್ಯೆಗೆ ಕಾರಣವಾಗಿದೆ. ಸಂಬAಧ ಪಟ್ಟ ಅಧಿಕಾರಿಗಳು ತ್ಯಾಜ್ಯ ಉಪೇಕ್ಷಿಸುವರನ್ನು ಪತ್ತೆ ಹಚ್ಚಿ ಕ್ರಮಕೈಗೊಳ್ಳಲು ಸಾರ್ವಜನಿಕರು ಆಗ್ರಹಿಸಿದ್ದಾರೆ.







