ಕಾಸರಗೋಡು: ‘ನೀರು ಅಮೂಲ್ಯ. ಅದನ್ನು ಹಾಳುಮಾಡಬಾರದು’ ಎಂಬು ದನ್ನು ಕಲಿತಿರುವ ನಾವೆಲ್ಲ ಕಾಸರ ಗೋಡು ನಗರದಲ್ಲೇ ಪೋಲಾಗುತ್ತಿರುವ ನೀರನ್ನು ಕಾಣುವಾಗ ಈ ನೀರು ಅಮೂಲ್ಯವಲ್ಲವೇ? ಎಂಬ ಶಂಕೆ ಮೂಡುವುದು ಸಾಮಾನ್ಯವಾಗಿದೆ. ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಮುಂಭಾಗ ಆಟೋ ರಿಕ್ಷಾ ನಿಲ್ದಾಣಕ್ಕೆ ಹೊಂದಿಕೊಂಡು ಕಾರಂಜಿಯಂತೆ ಚಿಮ್ಮುತ್ತಿರುವ ನೀರು ಅಧಿಕಾರಿಗಳ ಗಮನಕ್ಕೆ ಬಾರದಿರುವುದು ಸೋಜಿಗವಾ ಗಿದೆ. ಜಲಪ್ರಾಧಿಕಾರದ ಪೈಪ್ ತುಂಡಾಗಿ ಕಳೆದೆರಡು ದಿನಗಳಿಂದ ಇಲ್ಲಿ ನೀರು ಪೋಲಾಗುತ್ತಿದೆ. ನಗರ ಮಧ್ಯದ ಬ್ಯಾಂಕ್ ರಸ್ತೆ ಸದಾ ದಟ್ಟಣೆಯಲ್ಲಿದ್ದು ಈ ರಸ್ತೆಯಲ್ಲಿ ಸಾಗುವವರಿಗೆ ನೀರಿನಿಂದ ಒದ್ದೆಯಾಗಬೇಕಾದ ಸ್ಥಿತಿ ಈಗ ಇದೆ. ವಿವಿಧ ಕಡೆಗಳಿಗೆ ತೆರಳುವ ಜನರು, ವಾಹನಗಳು ತುರ್ತಾಗಿ ಸಾಗುವಾಗ ದಿಢೀರಾಗಿ ಬೀಳುವ ನೀರ ಹನಿಗಳಿಂದ ವಿಚಲಿತರಾಗುತ್ತಾರೆ. ಇಲ್ಲಿ ಮಾತ್ರವಲ್ಲದೆ ನಗರದ ಹೊಸ ಬಸ್ ನಿಲ್ದಾಣ ಸಮೀಪದ ಕೋಟೆಕಣಿ ರಸ್ತೆ ಬದಿಯ ಚರಂಡಿಯಲ್ಲಿ ಶುದ್ಧಜಲ ಹರಿಯುತ್ತಿರುವುದು ಹಲವು ದಿನಗಳಿಂದ ಕಂಡುಬರುತ್ತಿದೆ. ವಿವಿಧ ಕಡೆಗಳಲ್ಲಿ ಪೈಪ್ ತುಂಡಾಗಿ ಈ ರೀತಿ ನೀರು ಪೋಲಾಗುತ್ತಿರುವುದರಿಂದಾಗಿ ಹಲವು ಮನೆಗಳಿಗೆ ಶುದ್ಧಜಲ ಲಭ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಕೆಲವು ಕಡೆಗಳಲ್ಲಿ ಎತ್ತರ ಪ್ರದೇಶದ ಮನೆಗಳಿಗೆ ನೀರಿನ ರಭಸ ಕಡಿಮೆಯಾಗಿ ನೀರು ತಲುಪದ ಸ್ಥಿತಿಯೂ ಇದೆ ಎನ್ನಲಾಗಿದೆ. ಅಧಿಕಾರಿಗಳು ಕಣ್ಣು ತೆರೆದು ಈ ರೀತಿ ಪೋಲಾಗುತ್ತಿರುವ ನೀರನ್ನು ಸಂರಕ್ಷಿಸಿದರೆ ಮಾತ್ರವೇ ನೀರು ಅಮೂಲ್ಯವೆಂದು ಹೇಳುವುದಕ್ಕೆ ಅರ್ಥವಿದೆಯೆಂದು ಜನರು ನುಡಿಯುತ್ತಾರೆ.






