ತಿರುವನಂತಪುರ: ಸ್ಥಳೀಯಾಡಳಿತ ಸಂಸ್ಥೆಗಳಿಗೆ ಇನ್ನೇನು ಚುನಾವಣೆ ನಡೆಯಲಿರುವಂತೆಯೇ ಅದನ್ನು ಮುಂದಕ್ಕೆ ಕಂಡುಕೊAಡು ರಾಜ್ಯ ಸರಕಾರ ಕೊಡುಗೆಗಳ ಮಹಾಪೂರವನ್ನೇ ಘೋಷಿಸಿದೆ.
ಇದರಂತೆ ಸಾಮಾಜಿಕ ಕಲ್ಯಾಣ ಪಿಂಚಣಿ ಮೊತ್ತವನ್ನು ಈಗಿರುವ 1600ರೂ.ನಿಂದ 2000 ರೂ.ಗೇರಿಸ ಲಾಗಿದೆ. ಆಶಾಕಾರ್ಯಕರ್ತರು, ಅಂಗನವಾಡಿ ವರ್ಕರ್ಸ್ ,ಹೆಲ್ಪರ್, ಪ್ರೈಮರೀ ಟೀಚರ್, ಆಯಾ, ಸಾಕ್ಷರತಾ ಪ್ರೇರಕ್ರ ಗೌರವಧನದಲ್ಲೂ ತಲಾ 1000 ರೂ.ನಂತೆ ಹೆಚ್ಚಳ ಘೋಷಿಸ ಲಾಗಿದೆ. ಆಶಾ ಕಾರ್ಯಕರ್ತರಿಗೆ ವಿತರಿಸಲು ಬಾಕಿ ಇರುವ ಹಣವನ್ನು ಶೀಘ್ರ ವಿತರಿಸಲಾಗುವುದು. ನಿನ್ನೆ ಸೇರಿದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ತರ ತೀರ್ಮಾನ ಕೈಗೊಳ್ಳಲಾಗಿದೆ.
ಮನೆಯೊಡತಿಯರಿಗಾಗಿ ಹೊಸ ಪಿಂಚಣಿ ಯೋಜನೆಯನ್ನೂ ಘೋಷಿಸಲಾಗಿದೆ. ಇದರಂತೆ 35ರಿಂದ ಮಧ್ಯ ಪ್ರಾಯದ ಎಎವೈ (ಹಳದಿ ಕಾರ್ಡ್) ಮತ್ತು ಪಿಎಚ್ಎಚ್ (ಆದ್ಯತಾ ವಿಭಾಗ ಪಿಂಕ್ ಕಾರ್ಡ್) ವಿಭಾಗಕ್ಕೆ ಸೇರಿದ 31.34 ಲಕ್ಷ ಮಹಿಳೆಯರಿಗೆ ಪ್ರತೀ ತಿಂಗಳು ಇನ್ನು ತಲಾ 1000 ರೂ.ನಂತೆ ಪಿಂಚಣಿ ನೀಡಲಾಗುವುದು. ಜ್ಯಾರಿಯಲ್ಲಿರುವ ಸಾಮಾಜಿಕ ಕಲ್ಯಾಣ ಪಿಂಚಣಿ ಲಭಿಸದವರಿಗೆ ಮಾತ್ರವೇ ಇದು ಲಭಿಸಲಿದೆ. ಮಹಿಳಾ ಸುರಕ್ಷಾ ಯೋಜನೆಯ ಹೆಸರಲ್ಲಿ ಇದನ್ನು ಜ್ಯಾರಿಗೊಳಿಸಲಾಗುವುದು.
ವಿದ್ಯಾರ್ಥಿಗಳಿಗೆ ಉದ್ಯೋಗ ಲಭಿಸುವಂತೆ ಮಾಡಲು ಅದಕ್ಕೆ ಅಗತ್ಯದ ತರಬೇತಿಗಾಗಿ ಆರ್ಥಿಕ ನೆರವು ಒದಗಿಸಲು ಕನೆಕ್ಟ್-ಟೂ-ವರ್ಕ್ ಸ್ಕಾಲರ್ಶಿಪ್ ಎಂಬ ಯೋಜನೆಯನ್ನು ಘೋಷಿಸಲಾಗಿದೆ. ಒಂದು ಲಕ್ಷಕ್ಕಿಂತ ಕೆಳಗೆ ಕುಟುಂಬ ಆದಾಯ ಹೊಂದಿರುವ ಕುಟುಂಬಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ಇದರ ಪ್ರಯೋಜನ ಲಭಿಸಲಿದೆ. ಇದರಂತೆ 18ರಿಂದ 30ರ ನಡುವಿನ ವಯೋಮಿತಿಯ ವಿದ್ಯಾರ್ಥಿಗಳಿಗೆ ತಲಾ 1000ರೂ.ನಂತೆ ಒಟ್ಟು ಐದು ಲಕ್ಷ ಮಂದಿಗೆ ಇದರ ಪ್ರಯೋಜನ ಲಭಿಸಲಿದೆ. ಇದರ ಹೊರತಾಗಿ ಸರಕಾರಿ ಸಿಬ್ಬಂದಿಗಳಿಗೆ ವಿತರಿಸಲು ಬಾಕಿ ಇರುವ ಶೇ. 4ರಷ್ಟು ತುಟ್ಟಿಭತ್ತೆ (ಡಿ.ಎ)ಯನ್ನು ನವೆಂಬರ್ ವೇತನದ ಜತೆಗೆ ಲಭಿಸಲಿದೆ. ಇದರಂತೆ ಸಿಬ್ಬಂದಿಗಳಿಗೆ ವಿತರಿಸಲು ಬಾಕಿ ಇರುವ ಡಿಎ ಇನ್ನು ಶೇ. 13ಕ್ಕೆ ಇಳಿದಿದೆ. ರಾಜ್ಯದ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಡಿಸೆಂಬರ್ನಲ್ಲಿ ಚುನಾವಣೆ ನಡೆಯಲಿದ್ದು, ಅದನ್ನು ಮುಂದಕ್ಕೆ ಕಂಡುಕೊAಡು ಮತದಾರರನ್ನು ತಮ್ಮತ್ತ ಸೆಳೆದುಕೊಳ್ಳುವ ಉದ್ದೇಶದಿಂದ ಈ ಚುನಾವಣೆಯ ಹೊಸ್ತಿಲಲ್ಲೇ ಸರಕಾರ ಈ ಹೊಸ ಕೊಡುಗೆಗಳ ಘೋಷಣೆ ಹೊರಡಿಸಿದೆ. ನವೆಂಬರ್ 1ರಿಂದ ಈ ಘೋಷಣೆಗಳು ವಿದ್ಯುಕ್ತವಾಗಿ ಜ್ಯಾರಿಗೆ ಬರಲಿದೆ ಎಂದು ಸರಕಾರ ತಿಳಿಸಿದೆ.

 
								 
															





