ಕುಂಬಳೆ: ಆರಿಕ್ಕಾಡಿಯಲ್ಲಿ ಕಾಡು ಹಂದಿಯೊಂದು ಬಾವಿಗೆ ಬಿದ್ದಿದ್ದು ಅರಣ್ಯಾಧಿಕಾರಿಗಳು ಅದನ್ನು ಮೇಲೆತ್ತಿ ಅಪಾಯದಿಂದ ರಕ್ಷಿಸಿದ್ದಾರೆ. ಆರಿಕ್ಕಾಡಿ ಕಾರ್ಳೆಯಲ್ಲಿ ವ್ಯಕ್ತಿಯೊಬ್ಬರ ಹಿತ್ತಿಲಲ್ಲಿರುವ ಆವರಣವಿರದ ಬಾವಿಯಲ್ಲಿ ನಿನ್ನೆ ಬೆಳಿಗ್ಗೆ ಶಬ್ದ ಕೇಳಿ ಬಂದ ಹಿನ್ನೆಲೆಯಲ್ಲಿ ಮನೆಯವರು ಅಲ್ಲಿಗೆ ತೆರಳಿ ನೋಡಿದಾಗ ಹಂದಿ ನೀರಿನಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿರುವುದು ಕಂಡು ಬಂದಿದೆ. ಈ ಬಗ್ಗೆ ಮನೆ ಮಾಲಕ ಅರಣ್ಯಾಧಿಕಾರಿಗಳಿಗೆ ವಿಷಯ ತಿಳಿಸಿದ್ದರು. ಅರಣ್ಯ ಇಲಾಖೆಯ ರಾಪಿಡ್ ರೆಸ್ಕ್ರೂಫೋರ್ಸ್ ಬಾವಿಗೆ ಬಲೆ ಇಳಿಸಿ ಹಂದಿಯನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿದ್ದಾರೆ. ಬಳಿಕ ಅದನ್ನು ಕೊಂಡೊಯ್ದು ಆರೋಗ್ಯ ಸುಧಾರಿಸಿದ ಬಳಿಕ ಕಾಡಿಗೆ ಬಿಡುವುದಾಗಿ ತಿಳಿಸಲಾಗಿದೆ.
