ಕುಂಬಳೆ: ರಾಷ್ಟ್ರೀಯ ಹೆದ್ದಾರಿಯ ಕುಂಬಳೆಯಲ್ಲಿ ವಾಹನಗಳಿಂದ ಟೋಲ್ ಸಂಗ್ರಹಿಸುತ್ತಿರುವುದರ ವಿರುದ್ಧ ಕ್ರಿಯಾ ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ಚಳವಳಿ ತೀವ್ರಗೊಂಡಿದೆ. ಇದರ ಅಂಗವಾಗಿ ನಿನ್ನೆ ಮಹಿಳೆಯರು ನಡೆಸಿದ ಟೋಲ್ ಬೂತ್ ಮಾರ್ಚ್‌ನಿಂದ ಅಲ್ಪ ಹೊತ್ತು ಸಂಘರ್ಷಾವಸ್ಥೆ ಸೃಷ್ಟಿಸಿತು. ವಿವಿಧ ಭಾಗಗಳಿಂದ ಆಗಮಿಸಿದ ಮಹಿಳೆಯರು ಟೋಲ್ ಬೂತ್‌ಗೆ ನುಗ್ಗಲು ಯತ್ನಿಸಿದರು. ಬಳಿಕ ಶಾಸಕರ ನೇತೃತ್ವದಲ್ಲಿ ಮುಷ್ಕರ ಸಮಿತಿ ಪದಾಧಿಕಾರಿಗಳು ಮಾತುಕತೆ ನಡೆಸಿದುದರಿಂದ ಚಳವಳಿನಿರತರು ರಸ್ತೆಯಲ್ಲಿ ಕುಳಿತು ಪ್ರತಿಭಟಿಸಿದರು. ಇದರಿಂದ ಅರ್ಧ ಗಂಟೆ ಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಅನಂತರ ರಸ್ತೆಯ ಎರಡೂ ಭಾಗಗಳಲ್ಲಿ ವಾಹನಗಳ ಸಂಚಾರಕ್ಕೆ ಸೌಕರ್ಯ ಏರ್ಪಡಿಸಿದ್ದು, ಇದರಿಂದ ಸಾರಿಗೆ ವ್ಯವಸ್ಥೆ ಆಂಶಿಕವಾಗಿ ಮರುಸ್ಥಾಪಿಸಲಾಯಿತು.
ಕಂಬಳೆ ಬಸ್ ನಿಲ್ದಾಣ ಪರಿಸರದಿಂದ ಮಹಿಳೆಯರು ಮೆರವಣಿಗೆ ಆರಂಭಿಸಿದ್ದು, ಶಾಸಕ ಎಕೆಎಂ ಅಶ್ರಫ್ ಉದ್ಘಾಟಿಸಿದರು. ಮೆರವಣಿಗೆ ಟೋಲ್‌ಬೂತ್ ಸಮೀಪ ತಲುಪಿದಾಗ ಮಹಿಳಾ ಪೊಲೀಸರ ನೇತೃತ್ವದಲ್ಲಿ ಪೊಲೀಸರು ತಡೆದರೂ ಪೊಲೀಸರನ್ನು ದೂಡಿ ಟೋಲ್‌ಬೂತ್‌ಗೆ ನುಗ್ಗಲು ಯತ್ನಿಸಿರುವುದಾಗಿ ಹೇಳಲಾಗುತ್ತಿದೆ.







