ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆಯಲಿರುವ ಚುನಾವಣೆಯ ವಾರ್ಡ್ ವಿಭಜನೆ ಪ್ರಕ್ರಿಯೆಗಳು ಪೂರ್ಣಗೊಂಡ ಬೆನ್ನಲ್ಲೇ ಗ್ರಾಮ ಪಂಚಾಯತ್‌ಗಳಲ್ಲಿ ಮಹಿಳಾ ಅಧ್ಯಕ್ಷರ ಮೀಸಲಾತಿಯನ್ನು ಘೋಷಿಸಲಾಗಿದೆ. ಇದರಂತೆ ಜಿಲ್ಲೆಯ 38 ಪಂಚಾಯತ್‌ಗಳ ಪೈಕಿ 19 ಅಧ್ಯಕ್ಷ ಸ್ಥಾನಗಳನ್ನು ಮಹಿಳೆಯರಿಗಾಗಿ ಮೀಸಲಿರಿಸಲಾಗಿದೆ. ಇದರಲ್ಲಿ ತಲಾ ಒಂದು ಅಧ್ಯಕ್ಷ ಸ್ಥಾನವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರಿಗಾಗಿ ಮೀಸಲಿರಿಸಲಾಗಿದೆ.
ಇದು ಮಾತ್ರವಲ್ಲದೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗಾಗಿ ತಲಾ ಒಂದರಂತೆ ಅಧ್ಯಕ್ಷ ಸ್ಥಾನ ಮೀಸಲಿರಿಸಲಾಗಿದೆ. ಇನ್ನು ಆರು ಬ್ಲೋಕ್ ಪಂಚಾಯತ್‌ಗಳ ಪೈಕಿ ಮೂರರ ಅಧ್ಯಕ್ಷ ಸ್ಥಾನವನ್ನು ಮಹಿಳೆಯರಿಗಾಗಿ ಮೀಸಲುಗೊಳಿಸಲಾಗಿದೆ. ಇದರಲ್ಲಿ ಒಂದು ಅಧ್ಯಕ್ಷಸ್ಥಾನವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿದ ಮಹಿಳೆಯರಿಗಾಗಿ ಮೀಸಲಿರಿಸಲಾಗಿದೆ. ಆದರೆ ಯಾವುದೆಲ್ಲ ಗ್ರಾಮ ಪಂಚಾಯತ್ ಮತ್ತು ಬ್ಲೋಕ್ ಪಂಚಾಯತ್‌ಗಳ ಅಧ್ಯಕ್ಷ ಸ್ಥಾನಗಳನ್ನು ಈ ರೀತಿ ಮೀಸಲಿರಿಸಲಾಗಿದೆ ಎಂಬುದನ್ನು ದೃಢೀಕರಿಸುವ ಅಧಿಸೂಚನೆಯನ್ನು ಇನ್ನೂ ಹೊರಡಿಸಲಾಗಿಲ್ಲ. ನಗರಸಭೆಗಳು ಮತ್ತು ಜಿಲ್ಲಾ ಪಂಚಾಯತ್‌ನ ಅಧ್ಯಕ್ಷಸ್ಥಾನ ಮೀಸಲಾತಿಯನ್ನು ಇನ್ನಷ್ಟೇ ನಿರ್ಣಯಿಸಲು ಬಾಕಿ ಇದೆ. ಕಾಸರಗೋಡು ಜಿಲ್ಲಾ ಪಂಚಾಯತ್‌ನ ಅಧ್ಯಕ್ಷರು ಈಗ ಮಹಿಳೆಯಾಗಿರುವುದರಿಂದಾಗಿ ಆ ಸ್ಥಾನ ಇನ್ನು ಜನರಲ್ ಆಗಿ ಪರಿವರ್ತನೆಗೊಳ್ಳಲಿದೆ.







