ಮುಳ್ಳೇರಿಯ: ಹಾಡಹಗಲೇ ಮನೆಗೆ ಅತಿಕ್ರಮಿಸಿ ನುಗ್ಗಿದ ಯುವಕ 78ರ ಹರೆಯದ ವೃದ್ಧೆಯನ್ನು ಬಿಗಿದಪ್ಪಿಕೊಂಡ ಬಗ್ಗೆ ದೂರಲಾಗಿದೆ. ವೃದ್ಧೆ ಬೊಬ್ಬೆ ಹಾಕಿದಾಗ ನೆರೆಮನೆ ನಿವಾಸಿಗಳು ಅಲ್ಲಿಗೆ ತಲುಪಿದ್ದು ಅಷ್ಟರಲ್ಲಿ ಯುವಕ ಓಡಿ ಪರಾರಿಯಾಗಿದ್ದಾನೆ. ಬಳಿಕ ತಲುಪಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಮಿಂಚಿಪದವು ನಿವಾಸಿ ವಸಂತ (35) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಆದೂರು ಎಸ್ಐ ವಿನೋದ್ ಕುಮಾರ್ ನೇತೃತ್ವದ ಪೊಲೀಸರು ಈತನನ್ನು ಬಂಧಿಸಿದ್ದಾರೆ. ಆರೋಪಿಯನ್ನು ಇಂದು ನ್ಯಾಯಾಲಯದಲ್ಲಿ ಹಾಜರುಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ನಿನ್ನೆ ಸಂಜೆ 3.30ರ ವೇಳೆ ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ. ಆದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ ವೃದ್ಧೆಯ ಮನೆಗೆ ನುಗ್ಗಿದ ಆರೋಪಿ ವೃದ್ಧೆಯನ್ನು ಬಿಗಿದಪ್ಪಿಕೊಂಡಿರುವ ಬಗ್ಗೆ ದೂರಲಾಗಿದೆ. ಈ ವೇಳೆ ವೃದ್ಧೆಯ ಬೊಬ್ಬೆ ಕೇಳಿ ಸ್ಥಳೀಯರು ತಲುಪು ವಷ್ಟರಲ್ಲಿ ಆರೋಪಿ ಪರಾರಿಯಾಗಿದ್ದನು. ಈ ಬಗ್ಗೆ ನಾಗರಿಕರು ಆದೂರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಎಸ್ಐ ನೇತೃತ್ವದಲ್ಲಿ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ ಶೋಧ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
