ಕಾಸರಗೋಡು: ಮನೆಯೊಳಗೆ ಯುವಕ ಪ್ಲಾಸ್ಟಿಕ್ ಹಗ್ಗದಿಂದ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಕಾಸರಗೋಡು ಲೈಟ್ಹೌಸ್ ಕಡಪ್ಪುರ ಗಂಗಾನಗರ ವಾಣಿನಿಲಯ ನಿವಾಸಿ ಈ ಹಿಂದೆ ಗಲ್ಫ್ನಲ್ಲಿ ದುಡಿಯುತ್ತಿದ್ದು, ನಂತರ ಊರಿಗೆ ಹಿಂತಿರುಗಿ ನೆಲ್ಲಿಕುಂಜೆಯಲ್ಲಿ ವೆಲ್ಡಿಂಗ್ ಕಾರ್ಮಿಕರಾಗಿ ದುಡಿಯುತ್ತಿದ್ದ ಕೆ.ವಿ. ವಿಕೇಷ್ (28) ಸಾವನ್ನಪ್ಪಿದ ಯುವಕ. ಇವರು ಮೊನ್ನೆ ರಾತ್ರಿ ಊಟ ಮಾಡಿ ನಿದ್ರಿಸಲೆಂದು ಮನೆಯ ಕೊಠಡಿಯೊಳಗೆ ಹೋಗಿದ್ದರು. ನಿನ್ನೆ ಬೆಳಿಗ್ಗೆ ತಡವಾದರೂ ಕೊಠಡಿಯಿಂದ ಹೊರ ಬಾರದೇ ಇರುವುದನ್ನು ಕಂಡ ಮನೆಯವರು ಬಾಗಿಲು ತೆರೆದು ನೋಡಿದಾಗ ವಿಕೇಷ್ ಕೊಠಡಿಯ ಫ್ಯಾನ್ಗೆ ಹಗ್ಗ ಬಿಗಿದ ಸ್ಥಿತಿಯಲ್ಲಿ ಪತ್ತೆಹಚ್ಚಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ವೇಲಾಯುಧನ್- ವಾರಿಜಾಕ್ಷಿ ದಂಪತಿ ಪುತ್ರರಾಗಿರುವ ಮೃತರು ಸಹೋದರ ಗಣೇಶ್, ಸಹೋದರಿ ವಾಣಿಶ್ರೀ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ವಿಕೇಷ್ ಮರಳಿ ಗಲ್ಫ್ಗೆ ಹೋಗುವ ಸಿದ್ಧತೆಯಲ್ಲೂ ತೊಡಗಿದ್ದರೆನ್ನಲಾಗಿದೆ. ಈ ವೇಳೆಯಲ್ಲೇ ಅವರ ಸಾವು ಸಂಭವಿಸಿದೆ. ಕಾಸರಗೋಡು ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಿದರು. ಮೃತ ದೇಹವನ್ನು ನಂತರ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೊಳಪಡಿಸಲಾಯಿತು.






