ಕಾಸರಗೋಡು: ಕೌಟುಂಬಿಕ ಕಲಹದಿಂದ ಗಾಯಗೊಂಡು ಚಿಕಿತ್ಸೆ ಗಾಗಿ ಬಂದ ಯುವಕರ ಮೇಲೆ ಆಸ್ಪತ್ರೆಗೆ ನೇರವಾಗಿ ನುಗ್ಗಿ ಬಂದು ಅವರ ಮೇಲೆ ಪುನಃ ಹಲ್ಲೆ ನಡೆಸಿ ಆ ಮೂಲಕ ಮಹಿಳಾ ವೈದ್ಯೆಯ ಕರ್ತವ್ಯ ನಿರ್ವ ಹಣೆಗೆ ಅಡ್ಡಿ ಉಂಟುಮಾಡಿರುವುದನ್ನು ಪ್ರತಿಭಟಿಸಿ ಕೇರಳ ಸರಕಾರ ಮೆಡಿಕಲ್ ಆಫೀಸರ್ಸ್ (ಕೆಜಿಎಂಒ) ಮತ್ತು ಐಎಂಎ ನೇತೃತ್ವದಲ್ಲಿ ವೈದ್ಯರು ಹಾಗೂ ಸ್ಟಾಫ್ ಕೌನ್ಸಿಲ್‌ನ ನೇತೃತ್ವದ ಆಸ್ಪತ್ರೆಯ ಸಿಬ್ಬಂದಿಗಳು ಇಂದು ಬೆಳಿಗ್ಗೆ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮತ್ತೆ ಪ್ರತಿಭಟನೆ ನಡೆಸಿದರು.
ಜನರಲ್ ಆಸ್ಪತ್ರೆಯಲ್ಲಿ ಇಂದು ಬೆಳಿಗ್ಗೆ ನಡೆದ ಪ್ರತಿಭಟನೆಯಲ್ಲಿ ಕೆ.ಜಿ.ಎಂ.ಒ.ಎ ಜಿಲ್ಲಾಧ್ಯಕ್ಷೆ ಡಾ| ಸಮೀಮಾ ತನ್ವೀರ್, ಐಎಂಎ ಕಾಸರಗೋಡು ಶಾಖೆ ಅಧ್ಯಕ್ಷೆ ಡಾ. ರೇಖಾ ರೈ, ಡಾ| ಜನಾರ್ದನ್ ನಾಯ್ಕ್ ಸಿ.ಎಚ್, ಡಾ| ರವಿಕುಮಾರ್, ಡಾ| ಅನ್ಸಾದ್, ಡಾ| ಸಂಧ್ಯಾ ಪ್ರದೀಪ್, ಡಾ| ಜಮಾಲ್ ಅಹಮ್ಮದ್ ಜನರಲ್ ಆಸ್ಪತ್ರೆಯ ಉಸ್ತುವಾರಿ ಸುಪರಿಂಟೆಂ ಡೆಂಟ್ ಡಾ| ಸುನಿಲ್ ಕುಮಾರ್, ನರ್ಸಿಂಗ್ ಸೂಪರಿಂಟೆಂಡೆಂಟ್ ಲತಾ ಎನ್.ಎಸ್. ಮೊದಲಾದವರು ಮಾತನಾಡಿದರು. ಡಾ| ಅರುಣ್ ರಾಮ್ ಅಧ್ಯಕ್ಷತೆ ವಹಿಸಿದರು.
ನಗರದ ಅಣಂಗೂರು ಬೆದಿರಾ ನಿವಾಸಿಗಳು ಹಾಗೂ ಸಂಬಂಧಿಕರೂ ಆಗಿರುವ ಸೈನುದ್ದೀನ್, ಶಿಹಾಬ್ ಮತ್ತು ಶಾನಿಬ್ ಎಂಬವರ ಮಧ್ಯೆ ನಿನ್ನೆ ಪರಸ್ಪರ ಮಾರಾಮಾರಿ ನಡೆದಿತ್ತು. ಅದರ ಪರಿಣಾಮ ಸೈನುದ್ದೀನ್ ತಲೆ ಮತ್ತು ಶಿಹಾಬ್‌ನ ಕೈಗೆ ಗಾಯ ಉಂಟಾಗಿತ್ತು. ಗಾಯಗೊಂಡ ಇಬ್ಬರು ನಿನ್ನೆ ಜನರಲ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಿದ್ದರು. ಅವರನ್ನು ನೋಡಲು ಅವರ ಸಂಬಂ ಧಿಕರು ಹಾಗೂ ಊರವರು ಆಸ್ಪತ್ರೆಗೆ ಆಗಮಿಸಿದ್ದರು. ಇದೇ ವೇಳೆ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳುಗಳಾದ ಸೈನುದ್ದೀನ್ ಮತ್ತು ಶಿಹಾಬ್‌ನ ಮೇಲೆ ಶಾನಿಬ್ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ಕೊಠಡಿಗೆ ನುಗ್ಗಿ ಬಂದುಅವರ ಮೇಲೆ ಹಲ್ಲೆ ನಡೆಸಿದನೆಂದು ಆರೋಪಿಸಲಾಗಿದೆ. ಆಗ ಅದನ್ನು ತಡೆಯಲು ಯತ್ನಿಸಿದ ಮಹಿಳಾ ವೈದ್ಯೆಯ ಮೇಲೂ ಆತ ಕೈ ಮಾಡಲೆತ್ನಿಸಿದನೆಂದೂ ಆರೋಪಿಸಲಾಗಿದೆ. ಆ ವೇಳೆ ಅಲ್ಲಿ ಭಾರೀ ಸಂಘರ್ಷದ ವಾತಾವರಣವೂ ಸೃಷ್ಟಿಯಾಯಿತು. ಬಳಿಕ ಆಸ್ಪತ್ರೆಯ ಇತರ ಸಿಬ್ಬಂದಿಗಳು ಹಾಗೂ ಇತರರು ಮಧ್ಯಪ್ರವೇಶಿಸಿ ಸಂಘರ್ಷ ವಾತಾವರಣವನ್ನು ನಿವಾರಿಸಿದರು. ಬಳಿಕ ಗಾಯಗೊಂಡವರು ಮತ್ತೆ ಹಲ್ಲೆ ನಡೆಸಿದ ವ್ಯಕ್ತಿ ಆಸ್ಪತ್ರೆಯಿಂದ ನಿರ್ಗಮಿಸಿದರು. ಆಸ್ಪತ್ರೆಗೆ ನುಗ್ಗಿ ಘರ್ಷಣೆಯ ವಾತಾವರಣ ಸೃಷ್ಟಿಸಿ ಆ ಮೂಲಕ ವೈದ್ಯರ ಕರ್ತವ್ಯ ನಿರ್ವಹಣೆಗೆ ಅಡ್ಡಿ ಉಂಟುಮಾಡಿ ಭೀತಿಯ ವಾತಾವರಣ ನಿರ್ಮಿಸಿದುದನ್ನು ಪ್ರತಿಭಟಿಸಿ ಬಳಿಕ ಆಸ್ಪತ್ರೆಯಲ್ಲಿ ಪ್ರತಿಭಟನೆ ನಡೆಸಿದರು. ಆ ಬಗ್ಗೆ ಮಹಿಳಾ ವೈದ್ಯ ನೀಡಿದ ದೂರಿನಂತೆ ಆಸ್ಪತ್ರೆಗೆ ಅಕ್ರಮವಾಗಿ ನುಗ್ಗಿ ಬಂದು ಹಲ್ಲೆ ನಡೆಸಿ, ಕರ್ತವ್ಯ ನಿರ್ವಹಣೆಗೆ ಅಡಚಣೆ ಉಂಟುಮಾಡಿದ ಸೆಕ್ಷನ್‌ಗಳ ಪ್ರಕಾರ ಕಾಸರಗೋಡು ಪೊಲೀಸರು ಅಣಂಗೂರಿನ ಶಾನೀಬ್‌ನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಇದೇ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳಿಗೆ ಅಗತ್ಯದ ಭದ್ರತೆ ಏರ್ಪಡಿಸಿದ ನಿಲುವನ್ನು ಪ್ರತಿಭಟಿಸಿ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳು ಇಂದು ಬೆಳಿಗ್ಗೆ 9.30 ರಿಂದ 10.30 ರ ತನಕ ಆಸ್ಪತ್ರೆಯ ಎದುರು ಮತ್ತೆ ಪ್ರತಿಭಟನೆ ನಡೆಸಿದರು. ಆಸ್ಪತ್ರೆಯಲ್ಲಿ ಅಗತ್ಯದ ಪೊಲೀಸರು ಭದ್ರತೆ ಏರ್ಪಡಿಸಬೇಕೆಂದು ಅವರು ಆಗ್ರಹಪಟ್ಟಿದ್ದಾರೆ.







