ಕುಂಬಳೆ: ದೀಪಾವಳಿ ಆಚರಣೆಯಂಗವಾಗಿ ಅಲಂಕಾರ ದೀಪ ಅಳವಡಿಸುತ್ತಿದ್ದಾಗ ವಿದ್ಯುತ್ ಶಾಕ್ ತಗಲಿ ಯುವಕ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಪುತ್ತಿಗೆ ಆಚಾರಿಮೂಲೆಯ ನಾಗೇಶ್ ಆಚಾರ್ಯ ಎಂಬವರ ಪುತ್ರ ರಾಜೇಶ್ ಆಚಾರ್ಯ (37) ಮೃತಪಟ್ಟ ದುರ್ದೈವಿಯಾಗಿದ್ದಾರೆ. ನಿನ್ನೆ ರಾತ್ರಿ ೯.೩೦ರ ವೇಳೆ ಈ ದಾರುಣ ಘಟನೆ ಸಂಭವಿಸಿದೆ. ಮನೆಯಲ್ಲಿ ವಿದ್ಯುತ್ ದೀಪಗಳನ್ನು ನೇತಾಡಿಸುತ್ತಿದ್ದಾಗ ರಾಜೇಶ್‌ಗೆ ಶಾಕ್ ತಗಲಿದೆ. ಇದರಿಂದ ತೀವ್ರ ಅಸ್ವಸ್ಥಗೊಂಡ ಅವರನ್ನು ಕೂಡಲೇ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ.
ಮೃತರು ತಂದೆ, ತಾಯಿ ಹೇಮಲತಾ, ಪತ್ನಿ ಪವಿತ್ರ, ಮಕ್ಕಳಾದ ಪ್ರಣ್ವಿತ, ಧನ್ವಿತ್, ಸಹೋದರ ಕಿರಣ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಘಟನೆ ಬಗ್ಗೆ ಕುಂಬಳೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಾಡಿನಾದ್ಯಂತ ದೀಪಾವಳಿ ಆಚರಣೆ ನಡೆಯುತ್ತಿರುವಂತೆಯೇ ಯುವಕ ಶಾಕ್ ತಗಲಿ ಮೃತಪಟ್ಟ ಘಟನೆ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ.