ಕಾಸರಗೋಡು: ಪ್ರೀತಿಯ ನಾಟಕವಾಡಿ ಮನೆಯೊಡತಿಯಿಂದ 10 ಪವನ್ ಚಿನ್ನದೊಡವೆ ಪಡೆದು ಬಳಿಕ ವಂಚಿಸಿದ ಪ್ರಕರಣದ ಆರೋಪಿಯಾಗಿ ಯೂತ್ ಕಾಂಗ್ರೆಸ್ ಕಾರ್ಯಕರ್ತನನ್ನು ಪೊಲೀಸರು ಬಂಧಿಸಿದ್ದಾರೆ.
ಯೂತ್ ಕಾಂಗ್ರೆಸ್ ಕಾರ್ಯಕರ್ತ, ನೀಲೇಶ್ವರ ಮಂಡಲ ಪ್ರಧಾನ ಕಾರ್ಯದರ್ಶಿ ಹಾಗೂ ಐಎನ್‌ಟಿಯುಸಿ ನೇತಾರನೂ ಆಗಿರುವ ನೀಲೇಶ್ವರ ಮಾರ್ಕೆಟ್ ಬಳಿಯಕಾಟಿ ಕುಳದ ಶನೀರ್ ಬಂಧಿತ ಆರೋಪಿ. ಈತನನ್ನು ಕಲ್ಲಿಕೋಟೆ ವೈದ್ಯಕೀಯ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಕೆ. ಬೈಜು ನೇತೃತ್ವದ ಪೊಲೀಸರು ನೀಲೇಶ್ವರ ಪೊಲೀಸರ ಸಹಾಯದಿಂದ ಬಂಧಿಸಿದ್ದಾರೆ.
ಕಲ್ಲಿಕೋಟೆ ವೈದ್ಯಕೀಯ ಕಾಲೇಜು ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಮನೆ ಮಾಲಕಿಯೋರ್ವರನ್ನು ನಕಲಿ ಫೇಸ್ ಬುಕ್ ಖಾತೆ ಮೂಲಕ ಪರಿಚಯಬೆಳೆಸಿ ಪ್ರೀತಿಸುವುದಾಗಿ ನಂಬಿಸಿ ನಂತರ ಅಡವಿರಿಸಲೆಂದು ಆಕೆಯಿಂದ 10 ಪವನ್ ಚಿನ್ನದೊಡವೆ ಪಡೆದು ನಂತರ ವಂಚಿಸಿರುವುದಾಗಿ ಆ ಮಹಿಳೆ ಆರೋಪಿ ವಿರುದ್ಧ ದೂರು ನೀಡಿದ್ದರು. ಅದರಂತೆ ಕಲ್ಲಿಕೋಟೆ ವೈದ್ಯಕೀಯ ಕಾಲೇಜು ಪೊಲೀಸರು ಆರೋಪಿ ವಿರುದ್ಧ ಕೇಸು ದಾಖಲಿಸಿಕೊಂಡಿದ್ದರು. ಅದಕ್ಕೆ ಸಂಬಂಧಿಸಿ ಆತನನ್ನು ನೀಲೇಶ್ವರದಿಂದ ಬಂಧಿಸಲಾಗಿದೆ.