ಉಪ್ಪಳ: ಬೈಕ್‌ಗೆ ಜೆಸಿಬಿ ಢಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ ಬೈಕ್ ಸವಾರನಾದ ಯುವಕ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ.
ಕೋಳ್ಯೂರು ಇರ್ನಡ್ಕ ಎಂಬಲ್ಲಿನ ರಮೇಶ್ ಹೇರಳ-ಮಲ್ಲಿಕಾ ದಂಪತಿಯ ಏಕ ಪುತ್ರ ಓಂಕಾರ್ ಹೇರಳ (24) ಮೃತಪಟ್ಟ ದುರ್ದೈವಿ ಯಾಗಿದ್ದಾರೆ. ನಿನ್ನೆ ರಾತ್ರಿ 7.30ರ ವೇಳೆ ಮೊರತ್ತಣೆ ಯಲ್ಲಿ ಅಪಘಾತ ವುಂಟಾಗಿದೆ. ಓಂಕಾರ್ ಕಡಂಬಾರ್ ಭಾಗದಿಂದ ಮನೆಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಎದುರಿನಿಂದ ಬಂದ ಜೆಸಿಬಿ ಢಿಕ್ಕಿ ಹೊಡೆದಿದೆ. ಇದರಿಂದ ಗಂಭೀರ ಗಾಯಗೊಂಡ ಓಂಕಾರ್‌ರನ್ನು ಕೂಡಲೇ ಹೊಸಂಗಡಿಯ ಆಸ್ಪತ್ರೆಗೆ ಕೊಂಡೊಯ್ದಿದ್ದು ಅಷ್ಟರೊಳಗೆ ಸಾವು ಸಂಭವಿಸಿದೆ.
ಮೃತದೇಹವನ್ನು ಮಂಗಲ್ಪಾಡಿ ಸರಕಾರಿ ಆಸ್ಪತ್ರೆಗೆ ತಲುಪಿಸಿದ್ದು, ಇಂದು ಮರಣೋತ್ತರ ಪರೀಕ್ಷೆ ನಡೆಯಲಿದೆ. ಅಪಘಾತ ಸಂಬಂಧ ಮಂಜೇಶ್ವರ ಪೊಲೀಸರು ಜೆಸಿಬಿ ಚಾಲಕನ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.
ಮೃತರು ಹೆತ್ತವರ ಹೊರತಾಗಿ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓಂಕಾರ್ ಹೇರಳರ ಅಕಾಲಿಕ ನಿಧನದಿಂದ ನಾಡಿನಲ್ಲಿ ಶೋಕಸಾಗರ ಸೃಷ್ಟಿಯಾಗಿದೆ.







