ಸೀತಾಂಗೋಳಿ: ಸೀತಾಂಗೋಳಿ ಯಲ್ಲಿ ನಿನ್ನೆ ರಾತ್ರಿ ಓರ್ವ ಯುವಕನಿಗೆ ಇರಿದು ಗಂಭೀರ ಗಾಯಗೊಳಿಸಿದ ಘಟನೆ ನಡೆದಿದೆ. ಬದಿಯಡ್ಕದ ಕುಟ್ಟನ್ ಯಾನೆ ಅನಿಲ್ ಕುಮಾರ್ (36) ಎಂಬವರು ಇರಿತದಿಂದ ಗಾಯಗೊಂಡಿದ್ದಾರೆ. ಇವರ ಕುತ್ತಿಗೆಗೆ ಚಾಕುವಿನಿಂದ ಇರಿಯಲಾಗಿದ್ದು, ಇದರಿಂದ ಗಂಭೀರ ಸ್ಥಿತಿಯಲ್ಲಿರುವ ಇವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಹಣ ವ್ಯವಹಾರಕ್ಕೆ ಸಂಬಂಧಪಟ್ಟ ತರ್ಕವೇ ಇರಿತಕ್ಕೆ ಕಾರಣವೆಂದು ಹೇಳಲಾಗುತ್ತಿದೆ. ಘಟನೆಗೆ ಸಂಬಂಧಿಸಿ ಕುಂಬಳೆ ಪೊಲೀಸರು ನಾಲ್ಕು ಮಂದಿಯನ್ನು ಹಾಗೂ ಎರಡು ವಾಹನ ಗಳನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ನಿನ್ನೆ ರಾತ್ರಿ 12 ಗಂಟೆ ವೇಳೆ ಸೀತಾಂಗೋಳಿಯಲ್ಲಿ ಘಟನೆ ನಡೆದಿದೆ. ಅನಿಲ್ ಕುಮಾರ್ ಬದಿಯಡ್ಕದಲ್ಲಿ ಮೀನು ವ್ಯಾಪಾರಿಯಾಗಿದ್ದಾರೆ. ಇವರನ್ನು ಫೋನ್‌ಕರೆ ಮಾಡಿ ಬರುವಂತೆ ತಿಳಿಸಿದ ಹಿನ್ನೆಲೆಯಲ್ಲಿ ಇವರು ಸೀತಾಂಗೋಳಿಗೆ ತಲುಪಿದ್ದರೆನ್ನಲಾಗಿದೆ. ಇವರ ಜೊತೆಗೆ ಇನ್ನೂ ಕೆಲವರಿದ್ದರೆಂದು ಸಂಶಯಿಸುತ್ತಿ ರುವುದಾಗಿ ಪೊಲೀಸರು ತಿಳಿಸಿದ್ದಾರೆ. ಸೀತಾಂಗೋಳಿಗೆ ತಲುಪಿದ ಬಳಿಕ ಅಲ್ಲಿದ್ದ ಮತ್ತೊಂದು ತಂಡದೊಂದಿಗೆ ಉಂಟಾದ ವಾಗ್ವಾದವೇ ಇರಿತದಲ್ಲಿ ಕೊನೆಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿರುವ ಅನಿಲ್ ಕುಮಾರ್‌ರ ಕುತ್ತಿಗೆಯಲ್ಲಿ ಚುಚ್ಚಿರುವ ಚಾಕುವನ್ನು ಹೊರ ತೆಗೆಯಲು ಶಸ್ತ್ರಚಿಕಿತ್ಸೆ ನಡೆಸಬೇಕಾಗಿ ಬರಲಿದೆ ಎಂದು ಹೇಳಲಾಗುತ್ತಿದೆ.