ಕುಂಬಳೆ: ನಡೆದಾಡಲಾಗದೆ 47 ವರ್ಷಗಳ ಕಾಲ ಮನೆಯೊಳಗೆ ಜೀವನ ಸಾಗಿಸಬೇಕಾಗಿದ್ದ ಯುವಕನಿಗೆ ಜಿಲ್ಲಾ ಪಂಚಾಯತ್ ವಿದ್ಯುತ್ ಗಾಲಿ ಕುರ್ಚಿ ನೀಡಿದ್ದು, ಇದರಿಂದ ಮನೆಯ ಹೊರಗಿನ ಪ್ರಕೃತಿ ಸೌಂದರ್ಯ ವೀಕ್ಷಿಸುವ ಭಾಗ್ಯ ಅವರಿಗೆ ಲಭಿಸಿದೆ.
ಕುಂಬಳೆ ಕೊಯಿಪ್ಪಾಡಿ ಕೋಟಿ ಹೌಸ್‌ನ ಅಬೂಬಕರ್‌ರ ಪುತ್ರ ಹನೀಫ (49) ಇದೀಗ ಗಾಲಿ ಕುರ್ಚಿ ಮೂಲಕ ಮನೆಯ ಹೊರಗೆ ಸಂಚರಿಸುತ್ತಿದ್ದಾರೆ. ಜನಿಸಿ ಎರಡು ವರ್ಷವಾಗುತ್ತಲೇ ಹನೀಫರಿಗೆ ಜ್ವರ ಬಾಧಿಸಿತ್ತೆನ್ನಲಾಗಿದೆ. ಅನಂತರ ಅವರು ನಡೆದಾಡುವ ಶಕ್ತಿ ಕಳೆದುಕೊಂಡಿದ್ದಾರೆ. ಇದಕ್ಕಿರುವ ಚಿಕಿತ್ಸೆ ನಡೆಸಿದರೂ ಫಲಕಾರಿಯಾಗಲಿಲ್ಲ. ಇದರಿಂದ ಮನೆಯೊಳಗೆ ಇರಬೇಕಾದ ಸ್ಥಿತಿ ಹನೀಫರದ್ದಾಯಿತು. ಕಳೆದ 47 ವಷಗಳಿಂದ ಈ ಸಂಕಷ್ಟವನ್ನು ಇವರು ಎದುರಿಸುತ್ತಿದ್ದಾರೆ. ಆಸ್ಪತ್ರೆಗೆ ತೆರಳಲು ಮಾತ್ರವೇ ಮನೆಯಿಂದ ಹೊರಗೆ ಬರಬೇಕಾಗಿತ್ತು. ವಾಹನಕ್ಕೆ ಹತ್ತಬೇಕಾದರೆ ಎತ್ತಿಕೊಂಡು ಬರಬೇಕಾದ ಸ್ಥಿತಿಯಿತ್ತು. ಮಾತ್ರವಲ್ಲದೆ ಹೊರಗಿನ ಪ್ರಕೃತಿಯನ್ನು ವೀಕ್ಷಿಸಲೋ, ಇತರರನ್ನು ಭೇಟಿಯಾಗಲೋ ಸಾಧ್ಯವಾಗುತ್ತಿರಲಿಲ್ಲ. ಹನೀಫರ ದಯನೀಯ ಸ್ಥಿತಿಯನ್ನು ತಿಳಿದುಕೊಂಡ ಮುಸ್ಲಿಂ ಲೀಗ್ ಕೊಯಿಪ್ಪಾಡಿ ಕಡಪ್ಪುರ ವಾರ್ಡ್ ಸಮಿತಿ ವಿಷಯವನ್ನು ಪಂಚಾಯತ್ ಸದಸ್ಯೆಯೂ ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷೆಯಾದ ಎಂ.ಸಬೂರರ ಗಮನಕ್ಕೆ ತಂದಿತ್ತು. ಇದರಂತೆ ಸಬೂರ ಜಿಲ್ಲಾ ಪಂಚಾಯತ್ ಸದಸ್ಯೆ ಜಮೀಲ ಸಿದ್ದಿಕ್‌ರನ್ನು ಸಂಪರ್ಕಿಸಿ ಹನೀಫರ ಸಂಕಷ್ಟವನ್ನು ವಿವರಿಸಿ ಅವರಿಗೆ ವಿದ್ಯುತ್ ಗಾಲಿ ಕುರ್ಚಿ ನೀಡುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತ್‌ನಿಂದ ಹನೀಫರಿಗೆ ವಿದ್ಯುತ್ ಗಾಲಿ ಕುರ್ಚಿ ಮಂಜೂರು ಮಾಡಿದ್ದು, ಇತ್ತೀಚೆಗೆ ಕುಂಬಳೆ ಪಂಚಾಯತ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಾಲಿಕುರ್ಚಿ ವಿತರಿಸಲಾಯಿತು.
ಇದೀಗ ಹನೀಫ ವಿದ್ಯುತ್ ಗಾಲಿ ಕುರ್ಚಿಯ ಸಹಾಯದಿಂದ ಮನೆಯಿಂದ ಹೊರಗೆ ತೆರಳಿ ಕಡಪ್ಪುರ ಸಹಿತ ಸಮೀಪ ಪ್ರದೇಶಗಳಲ್ಲಿ ಸುತ್ತಾಡಿಕೊಂಡು ಪ್ರಕೃತಿ ಸೌಂದರ್ಯ ವೀಕ್ಷಿಸುತ್ತಿ ದ್ದಾರೆ. ಈ ಅವಕಾಶ ಲಭಿಸಲು ಸಹಾಯವೊದಗಿಸಿದ ಎಲ್ಲರಿಗೂ ಹನೀಫ ಕೃತಜ್ಞತೆ ಸಲ್ಲಿಸಿದ್ದಾರೆ.







