ಅಂಗಡಿಗೆ ಅಕ್ರಮವಾಗಿ ನುಗ್ಗಿ ಯುವಕನನ್ನು ಅಪಹರಿಸಿ ಹಲ್ಲೆಗೈದ ಪ್ರಕರಣ: ನಾಲ್ವರ ಸೆರೆ, ಕಾರು ವಶ
ಕಾಸರಗೋಡು: ನಗರದ ಚಕ್ರಬಜಾರ್‌ನಲ್ಲಿ ಮೊಬೈಲ್ ಫೋನ್ ಅಂಗಡಿ ನಡೆಸುತ್ತಿರುವ ಶಮ್ನ ಮಂಜಿಲ್‌ನ ಸವಾದ್ (೨೫) ಎಂಬವರನ್ನು ಕಾರಿನಲ್ಲಿ ಅಪಹರಿಸಿ ಅಣಂಗೂರಿಗೆ ಸಾಗಿಸಿ ಅವರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಕಾಸರಗೋಡು ಪೊಲೀಸ್ ಇನ್ಸ್‌ಪೆಕ್ಟರ್ ಪಿ. ಅಜಿತ್ ಕುಮಾರ್‌ರ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಮಾತ್ರವಲ್ಲ ಸವಾದ್‌ರನ್ನು ಅಪಹರಿಸಲು ಬಳಸಲಾದ ಕಾರನ್ನೂ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಅಣಂಗೂರು ಕೊಲ್ಲಂಪಾಡಿಯ ಎ. ಶಾನವಾಜ್ ಅಲಿಯಾಸ್ ಶಾನು (೩೮), ತಳಂಗರೆ ಬಾಂಗೋಡಿನ ಅಬ್ದುಲ್ ಮನಾಫ್ ಎ.ಎಂ. (೨೧), ಅಣಂಗೂರಿನ ಎ.ಎ. ಮುಹಮ್ಮದ್ ರಿಯಾಸ್ (೩೪) ಮತ್ತು ಅಣಂಗೂರು ಟಿ.ವಿ. ಸ್ಟೇಷನ್ ರಸ್ತೆ ಬಳಿ ಕೆ.ಎಸ್. ಮುಹಮ್ಮದ್ ರಿಯಾಸ್ (೨೫) ಎಂಬವರು ಬಂಧಿತ ಆರೋಪಿಗಳಾಗಿದ್ದಾರೆ.
ಸವಾದ್‌ರನ್ನು ಅ. ೧೦ರಂದು ಸಂಜೆ ಕಾರಿನಲ್ಲಿ ಬಂದ ತಂಡವೊಂದು ಬಲವಂತವಾಗಿ ಕಾರಿಗೇರಿಸಿ ಅಪಹರಿಸಿತ್ತು. ಆ ವೇಳೆ ಅದನ್ನು ತಡೆಯಲು ಯತ್ನಿಸಿದ ಅದೇ ಅಂಗಡಿಯಲ್ಲಿದ್ದ ಸವಾದ್‌ನ ತಂದೆ ಅಬೂಬಕರ್ (೬೭)ರ ಮೇಲೂ ಆ ತಂಡ ಹಲ್ಲೆ ನಡೆಸಿತ್ತೆಂದು ಆರೋಪಿಸಲಾಗಿದೆ.
ಅಪಹರಣಗಾರರು ಸವಾದ್‌ರನ್ನು ಕಾರಿನಲ್ಲಿ ಅಣಂಗೂರಿಗೆ ಸಾಗಿಸಿ ಅಲ್ಲಿ ಹಲ್ಲೆ ನಡೆಸುತ್ತಿದ್ದ ವೇಳೆ ಅದನ್ನು ತಿಳಿದ ಸವಾದ್‌ನ ಸ್ನೇಹಿತರು ಅಲ್ಲಿಗೆ ಆಗಮಿಸಿದಾಗ ಇತ್ತಂಡಗಳ ಮಧ್ಯೆ ಭಾರೀ ಮಾರಾಮಾರಿ ನಡೆದಿತ್ತು. ವಿಷಯ ತಿಳಿದ ಕಾಸರಗೋಡು ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ಅಲ್ಲಿಂದ ನಾಲ್ವರನ್ನು ಬಂಧಿಸಿ ಇತರರನ್ನು ಲಾಠಿ ಬೀಸಿ ಓಡಿಸಿ ಸ್ಥಿತಿ ನಿಯಂತ್ರಿಸಿದ್ದರು. ಗಾಯಗೊಂಡ ಸವಾದ್‌ನನ್ನು ಬಳಿಕ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಘರ್ಷಣೆ ನಡೆದ ಸ್ಥಳಕ್ಕೆ ನಾವು ಸಕಾಲದಲ್ಲಿ ಆಗಮಿಸದೇ ಇರುತ್ತಿದ್ದಲ್ಲಿ ಸವಾದ್‌ನ ಪ್ರಾಣಕ್ಕೇ ಬೆದರಿಕೆ ಉಂಟಾಗುತ್ತಿತ್ತೆಂದು ಪೊಲೀಸರು ತಿಳಿಸಿದ್ದಾರೆ. ಯುವತಿಯೋರ್ವಳಿಗೆ ವಾಟ್ಸಪ್ ಮೆಸೇಜ್ ಕಳುಹಿಸಿದ ವಿಷಯವೇ ಈ ಘರ್ಷಣೆಗೆ ಕಾರಣವಾಗಿದೆ ಎಂದು ಆರೋಪಿಸಲಾಗುತ್ತಿದೆ.