ಅಂಗಳದಲ್ಲಿ ನಿಲ್ಲಿಸಲಾಗಿದ್ದ ಸೈಕಲ್ ಕಳವು: ಇಬ್ಬರ ಸೆರೆ
ಬೋವಿಕ್ಕಾನ: ಮನೆ ಅಂಗಳದಲ್ಲಿ ನಿಲ್ಲಿಸಲಾಗಿದ್ದ ಗೇರ್ ಸೈಕಲ್ ಕಳವುಗೈದ ಘಟನೆ ಯೊಂದು ಬೋವಿಕ್ಕಾನದಲ್ಲಿ ನಡೆದಿದೆ. ಬೋವಿಕ್ಕಾನಕ್ಕೆ ಸಮೀಪದ ಮೊದಲಪ್ಪಾರ ನಿವಾಸಿ ಮೊದೀನ್ ಕುಂಞಿ ಎಂಬವರ ಮನೆ ಅಂಗಳದಿಂದ ಅವರ ಪುತ್ರ ಸಾಬೀತ್ತ್ನ ಸುಮಾರು ೨೦,೦೦೦ ರೂ. ಮೌಲ್ಯದ ಗೇರ್ ಸೈಕಲನ್ನು ಈ ರೀತಿ ಕಳವ ಗೈಯ್ಯಲಾಗಿದೆ. ಆ ಮನೆಯ ೨ ಅಂಗಳಕ್ಕೆ ಇಂಟರ್ಲಾಕ್ ಹಾಕಲಾಗುತ್ತಿತ್ತು. ಅದರಿಂದಾಗಿ ಸೈಕಲನ್ನು ಅಂಗಳದಿಂದ ಹೊರಕ್ಕೆ ಇರಿಸಲಾಗಿತ್ತು.
ಮೊನ್ನೆ ಮುಂಜಾನೆ ಈ ಕಳವು ನಡೆದಿದೆ. ಆ ಬಗ್ಗೆ ಮನೆಯವರು ನೀಡಿದ ದೂರಿನಂತೆ ಆದೂರು ಪೊಲೀಸರು ತನಿಖೆ ನಡೆಸಿದ್ದಾರೆ. ಸೈಕಲ್ ಕಳವು ನಡೆದ ಮನೆಯ ಸಿಸಿಟಿವಿಯನ್ನು ಪರಿಶೀಲಿಸಿದಾಗ ಅದರಲ್ಲಿ ಸೈಕಲನ್ನು ಓರ್ವ ತೆಗೆದುಕೊಂಡು ಹೋಗುವ ದೃಶ್ಯ ಗೋಚರಿಸಿತ್ತು. ಅದರ ಜಾಡು ಹಿಡಿದು ನಡೆಸಿದ ತನಿಖೆಯಲ್ಲಿ ಇಬ್ಬರನ್ನು ಬಂಧಿಸಲಾಯಿತು.ಬೋವಿಕ್ಕಾನ ನಿವಾಸಿಗಳಾದ ಮುಹಮ್ಮದ್ ರಫೀಕ್ (೨೬) ಮತ್ತು ಉಮರುಲ್ ಫಾರೂಕ್ (೨೮) ಬಂಧಿತರಾದ ಆರೋಪಿಗಳಾಗಿದ್ದಾರೆ. ಈ ಪೈಕಿ ಮುಹಮ್ಮದ್ ರಫೀಕ್ನ ವಿರುದ್ಧ ಸೈಕಲ್ ಕಳವುಗೈದ ಆರೋಪದಂತೆ ಹಾಗೂ ಆ ಸೈಕಲನ್ನು ಚೆರ್ಕಳದ ಅಂಗಡಿಯೊಂದಕ್ಕೆ ಮಾರಾಟ ಮಾಡಲು ಸಹಾಯ ಒದಗಿಸಿದ ಆರೋಪದಂತೆ ಉಮರುಲ್ ಫಾರೂಕ್ನ ವಿರುದ್ಧ ಪ್ರಕರಣ ದಾಖಲಿಸಿ, ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರಾದ ಆರೋಪಿಗಳ ಪೈಕಿ ಮುಹಮ್ಮದ್ ರಫೀಕ್ ಇತ್ತೀಚೆಗೆ ಬ್ಯಾಂಕ್ ಪಿಗ್ಮಿ ಕಲೆಕ್ಷನ್ ಏಜೆಂಟ್ ಓರ್ವರ ತಲೆಗೆ ಹೊಡೆದು ನಗದು ಹಣ ಎಗರಿಸಿದ ಪ್ರಕರಣದಲ್ಲೂ ಆರೋಪಿಗಳಾಗಿದ್ದಾನೆ. ಆತನ ವಿರುದ್ಧ ಬೇರೆ ಎರಡು ಕೇಸುಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ