ಅಪಘಾನಿಸ್ಥಾನದಲ್ಲಿ ಭಾರತೀಯ ರಾಯಭಾರ ಕಚೇರಿಗೆ ದಾಳಿ: ಮೂವರು ಸಾವು
ನವದೆಹಲಿ: ಅಪಘಾನಿಸ್ಥಾನದ ಜಲಾಲಾಬಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಅಪರಿಚಿತ ಬಂದೂಕುದಾರಿಗಳು ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ರಾಯಭಾರಿ ಕೇಂದ್ರದ ಮೂವರು ಸಿಬ್ಬಂದಿಗಳನ್ನು ಬಂದೂಕುದಾರಿಗಳು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ದಾಳಿಯಲ್ಲಿ ಓರ್ವ ಗಂಭೀರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಆದರೆ ಈ ದಾಳಿಯ ಹೊಣೆಗಾರಿಕೆ ಯನ್ನು ಯಾವುದೇ ಸಂಘಟನೆ ವಹಿಸಿಕೊಂಡಿಲ್ಲ. ಜಲಾಲಾಬಾ ಗ್‌ನಲ್ಲಿರುವ ಈ ರಾಯಭಾರಿ ಕೇಂದ್ರವನ್ನು 2020ರಲ್ಲಿ ಮುಚ್ಚಲಾಗಿತ್ತು. ಆದರೂ ಅದರಲ್ಲಿ ಅಪಘಾನಿಸ್ಥಾನದ ಸಿಬ್ಬಂದಿಗಳು ಈಗಲೂ ಸೇವೆ ಸಲ್ಲಿಸುತ್ತಿದ್ದಾರೆ.
ಈಮಧ್ಯೆ ಪಾಕಿಸ್ಥಾನ ಅಪಘಾನಿಸ್ಥಾನದ ಮೇಲೆ ನಿನ್ನೆ ರಾತ್ರೋರಾತ್ರಿ ವೈಮಾನಿಕ ದಾಳಿ ನಡೆಸಿದೆ. ಅದರಲ್ಲಿ ೧೫ ಮಂದಿ ಸಾವನ್ನಪ್ಪಿದ್ದಾರೆ. ಇದರಲ್ಲಿ ಅನೇಕ ಮಹಿಳೆಯರು ಮತ್ತು ಮಕ್ಕಳು ಒಳಗೊಂಡಿದ್ದಾರೆಂದು ವರದಿಗಳು ಸೂಚಿಸಿವೆ. ಅಪಘಾನಿಸ್ಥಾನದಲ್ಲಿ ಅಡಗಿರುವ ಪಾಕಿಸ್ಥಾನಿ ತೆಹ್ರೀಕ್ ಎ ತಾಲಿಬಾನ್ ಉಗ್ರರನ್ನು ಗುರಿಯಾಗಿಸಿಕೊಂಡು ಪಾಕಿಸ್ಥಾನ ದಾಳಿ ನಡೆಸಿದೆ ಎನ್ನಲಾಗಿದೆ. ಈ ದಾಳಿಯಲ್ಲಿ ಲಾಮನ್ ಸೇರಿದಂತೆ 7 ಹಳ್ಳಿಗಳನ್ನು ಗುರಿಯಾಗಿಸಲಾಗಿದೆ. ದಾಳಿ ವೇಳೆ ಒಂದೇ ಕುಟುಂಬದ 8 ಮಂದಿ ಮೃತಪಟ್ಟಿದ್ದಾರೆ. ಮಾತ್ರವಲ್ಲ ಈ ವೈಮಾನಿಕ ದಾಳಿ ಭಾರೀ ಹಾನಿ ಉಂಟುಮಾಡಿದೆ. ಆ ಪ್ರದೇಶದಲ್ಲಿ ಮತ್ತಷ್ಟು ಉದ್ವಿಗ್ಧತೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ವರದಿಗಳು ಸೂಚಿಸುತ್ತದೆ.