ಅಪ್ರಾಪ್ತರಾದ ನಾಲ್ಕು ಮಂದಿ ಗೋವಾಕ್ಕೆ ತೆರಳಲು ಯತ್ನ: ರೈಲು ನಿಲ್ದಾಣದಲ್ಲಿ ಸೆರೆ
ಕಾಸರಗೋಡು: ಅಗತ್ಯಕ್ಕೆ ಬೇಕಾಗಿದ್ದ ಹಣ, ಸಾಕಷ್ಟು ದಾಖಲೆಗಳಿಲ್ಲದೆ ಹೆತ್ತವರು, ಮನೆ ಮಂದಿಗೆ ತಿಳಿಯದಂತೆ ಪರಾರಿ ಯಾಗಲು ಯತ್ನಿಸಿದ ಅಪ್ರಾಪ್ತರಾದ ನಾಲ್ಕು ಗಂಡು ಮಕ್ಕಳನ್ನು ಕಾಸರಗೋಡು ರೈಲು ನಿಲ್ದಾಣದಿಂದ ರೈಲ್ವೇ ಪೊಲೀಸರು ಸೆರೆಹಿಡಿದರು. ಮೇಲ್ಪರಂಬ ಪೊಲೀಸ್ ಠಾಣೆ ವ್ಯಾಪ್ತಿಯ ಒಂದು ಊರಿನಿಂದ ನಾಲ್ಕು ಮಂದಿಯ ತಂಡ ಗೋವಾಕ್ಕೆ ಪ್ರವಾಸ ಹೋಗಲೆಂದು ಮನೆಯಿಂದ ಹೊರಟಿದ್ದರು. ನಿನ್ನೆ ಮಧ್ಯಾಹ್ನ 1 ಗಂಟೆಗೆ ಘಟನೆ ನಡೆದಿದೆ. ಮೇಲ್ಪರಂಬ ಪೊಲೀಸರು ಮಕ್ಕಳು ಊರು ಬಿಟ್ಟಿರುವ ಬಗ್ಗೆ ರೈಲ್ವೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಸಬ್ ಇನ್ಸ್ಪೆಕ್ಟರ್ ಎಂ.ವಿ. ಪ್ರಕಾಶನ್, ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಇಲ್ಯಾಸ್ ಹಾಗೂ ಇತರ ಪೊಲೀಸರು ರೈಲು ನಿಲ್ದಾಣದಲ್ಲಿ ವ್ಯಾಪಕ ಹುಡುಕಾಟ ನಡೆಸಿದ್ದರು. ಆಗ ದ್ವಿತೀಯ ಫ್ಲಾಟ್ ಫಾರ್ಮ್ನಲ್ಲಿ ನಾಲ್ವರು ಮಕ್ಕಳು ಕಂಡುಬಂದಿದ್ದಾರೆ. ಪ್ರಶ್ನಿಸಿದಾಗ ಗೋವಾಕ್ಕೆ ತೆರಳಲೆಂದು ಹೊರಟ ಬಗ್ಗೆ ಮಕ್ಕಳು ಹೇಳಿಕೆ ನೀಡಿದ್ದಾರೆ. 600 ರೂ. ಸಹಿತ ಇವರು ಗೋವಾಕ್ಕೆ ತೆರಳಲು ಹೊರಟಿದ್ದು, ಮೊಬೈಲ್ ಮನೆಯಲ್ಲೇ ಇರಿಸಿದ್ದರು. ಗೋವಾಕ್ಕೆ ಯಾವ ದಿಕ್ಕಿಗೆ ತೆರಳಬೇಕೆಂದು ತಿಳಿಯದೆ ರೈಲು ನಿಲ್ದಾಣದಲ್ಲಿರುವಾಗ ಪೊಲೀಸರು ಸೆರೆಹಿಡಿದಿದ್ದಾರೆ.