ಅಮೂಲ್ಯವಾದ ಕುಡಿಯುವ ನೀರು ಎರಡು ತಿಂಗಳಿಂದ ಪೋಲಾಗುತ್ತಿದ್ದರೂ ತಡೆಗೆ ಅಧಿಕಾರಿಗಳಿಂದ ಕ್ರಮವಿಲ್ಲ
ಕುಂಬಳೆ: ಜಲಪ್ರಾಧಿಕಾರದ ಕುಡಿಯುವ ನೀರು ವಿತರಣೆಯ ಪೈಪು ಬಿರುಕುಬಿಟ್ಟ ಪರಿಣಾಮ ಎರಡು ತಿಂಗಳಿಂದ ನೀರು ಪೋಲಾಗುತ್ತಿದೆ. ಈ ವಿಷಯ ಸಂಬಂಧಪಟ್ಟ ಜಲಪ್ರಾಧಿಕಾರದ ಅಧಿಕಾರಿಗಳಿಗೆ ತಿಳಿಸಿದ್ದರು. ದುರಸ್ತಿಗೆ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಉಳುವಾರು ಹೊಳೆಯಿಂದ ಸಂಗ್ರಹಿಸುವ ನೀರನ್ನು ಶುದ್ಧೀಕರಿಸಿ ಅಂಬಿಲಡ್ಕದಲ್ಲಿರುವ ಟ್ಯಾಂಕ್ಗೆ ತುಂಬಿಸಿ ಅಲ್ಲಿಂದ ಕೊಡ್ಯಮ್ಮೆ, ಬಂಬ್ರಾಣ, ಆರಿಕ್ಕಾಡಿ ಮೊದಲಾದೆಡೆಗೆ ನೀರು ವಿತರಣೆ ಮಾಡಲಾಗುತ್ತಿದೆ. ಈ ಪೈಪ್ ಕೊಡ್ಯಮ್ಮೆ ಊಜಾರು ಎಂಬಲ್ಲಿ ೨ ತಿಂಗಳ ಹಿಂದೆ ಬಿರುಕುಬಿಟ್ಟಿದೆ. ಇದರಿಂದಾಗಿ ಭಾರೀ ಪ್ರಮಾಣದಲ್ಲಿ ನೀರು ಪೋಲಾಗುತ್ತಿರುವುದರಿಂದ ಫಲಾನುಭವಿಗಳಿಗೆ ನೀರು ಲಭಿಸದಂತಾಗಿದೆ.
ಪೈಪ್ ಬಿರುಕುಬಿಟ್ಟು ನೀರು ಪೋಲಾಗುತ್ತಿರುವ ಬಗ್ಗೆ ನಾಗರಿಕರು ಅಧಿಕಾರಿಗಳಿಗೆ ತಿಳಿಸಿದ್ದರೂ ಇದುವರೆಗೆ ಪರಿಹಾರಕ್ರಮ ಕೈಗೊಂಡಿಲ್ಲವೆಂದು ನಾಗರಿಕರು ಆರೋಪಿಸುತ್ತ್ತಿದ್ದಾರೆ. ನೀರು ಅಮೂಲ್ಯವಾಗಿದೆ. ಅದನ ಪೋಲು ಮಾಡದಿರಿ ಎಂದು ತಿಳಿಸುವ ಅಧಿಕಾರಿಗಳೇ ತಿಂಗಳುಗಳಿಂದ ನೀರು ಪೋಲಾಗುತ್ತಿರುವುದನ್ನು ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆಂದು ನಾಗರಿಕರು ತಿಳಿಸುತ್ತಿದ್ದಾರೆ.