ಕಾಸರಗೋಡು: ಅಮೆರಿಕಾದಲ್ಲಿ ಉದ್ಯೋಗ ವಿಸಾ ನೀಡುವುದಾಗಿ ನಂಬಿಸಿ ಹಲವರಿಂದಾಗಿ ಕೋಟಿ ಗಟ್ಟಲೆ ರೂಪಾಯಿ ಪಡೆದು ವಂಚನೆ ಗೈದ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ತಿರುವನಂತಪುರ ನಿವಾಸಿ ಹಾಗೂ ಈಗ ಚೆನ್ನೈಯಲ್ಲಿ ವಾಸಿ ಸುತ್ತಿರುವ ಜೋಸೆಫ್ ಡಾನಿಯಲ್ (51) ಬಂಧಿತ ಆರೋಪಿ. ಶ್ರೀಕಂಠಾಪುರ ಪೊಲೀಸ್ ಠಾಣೆಯ ಎಸ್‌ಐ ಎಂ.ವಿ. ಶಿಜು ನೇತೃತ್ವದ ಪೊಲೀಸರ ತಂಡ ಈತನನ್ನು ಬಂಧಿಸಿದೆ. ಶ್ರೀಕಂಠಾಪುರ ಚೆಂಬತ್ತೋಡಿಯ ಜಿನೀಶ್ ಜೋರ್ಜ್ ಎಂಬವರ ಪತ್ನಿಗೆ ಅಮೆರಿಕಾದಲ್ಲಿ ಉದ್ಯೋಗ ವಿಸಾ ನೀಡುವುದಾಗಿ ನಂಬಿಸಿ ನಾಲ್ಕೂವರೆ ಲಕ್ಷ ರೂ. ಪಡೆದು ಬಳಿಕ ವಂಚನೆಗೈದ ಪ್ರಕರಣದಲ್ಲಿ ಆರೋಪಿ ಜೋಸೆಫ್ ಡಾನಿಯಲ್‌ನನ್ನು ಬಂಧಿಸಲಾಗಿದೆ. ಇದೇ ರೀತಿ ಆರೋಪಿ ಇತರ ಹಲವರನ್ನು ವಂಚಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈತನ ವಿರುದ್ಧ ತಳಿಪರಂಬ, ಉಳಿಕ್ಕಲ್ ಪೊಲೀಸ್ ಹಾಗೂ ಇಡುಕ್ಕಿ, ಕೊಲ್ಲಂ, ಪಾಲ್ಘಾಟ್ ಜಿಲ್ಲೆಗಳಲ್ಲಿ ಇದೇ ರೀತಿಯ ಹಲವು ಪ್ರಕರಣಗಳು ದಾಖಲುಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ರೀತಿ ಕಾಸರಗೋಡು ಜಿಲ್ಲೆಯ ರಾಜಪುರಂ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಪಾಣತ್ತೂರು ರಾಜು ಮ್ಯಾಥ್ಯೂ ಎಂಬವರಿಗೂ ಅಮೇರಿಕಾ ವಿಸಾ ನೀಡುವ ಭರವಸೆ ನೀಡಿ ಅವರಿಂದ 4.5 ಲಕ್ಷ ರೂ. ಎಗರಿಸಿದ ದೂರಿನಂತೆ ರಾಜಪುರಂ ಪೊಲೀಸರು ಇದೇ ಆರೋಪಿ ಜೋಸೆಫ್ ಡಾನಿಯಲ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.