ಕಾಸರಗೋಡು: ಅರಣ್ಯಕ್ಕೆ ಅತಿಕ್ರಮಿಸಿ ನುಗ್ಗಿ ಅರಣ್ಯ ಇಲಾಖೆ ಅಧಿಕಾರಿಗಳನ್ನು ನಿಂದಿಸಿದ ಕೆಎಸ್ಇಬಿ ಅಧಿಕಾರಿಗಳು, ಗುತ್ತಿಗೆದಾರನ ವಿರುದ್ಧ ಅರಣ್ಯ ಇಲಾಖೆ ಕೇಸು ದಾಖಲಿಸಿದೆ. ಅನುಮತಿರಹಿತವಾಗಿ ಅತಿಕ್ರಮಣ ನಡೆಸಿರುವುದು, ಸಸಿಗಳು ಮೊದಲಾದವುಗಳನ್ನು ನಾಶ ಮಾಡಿರುವುದಕ್ಕೆ ಕೇಸು ದಾಖಲಿಸಲಾಗಿದೆ. ಚೆರುಪುಳ ಪಾಡಿಯೋಟ್ಚಾಲ್ ವಿದ್ಯುತ್ ಸೆಕ್ಷನ್ನ ಅಸಿಸ್ಟೆಂಟ್ ಇಂಜಿನಿಯರ್ ಸನಲ್ ಪಿ. ಸದಾನಂದನ್, ಜಿಜೋ ತೋಮಸ್, ಸಬ್ ಇಂಜಿನಿಯರ್ಗಳಾದ ಶಿಜೊ, ಸಲಾಶ್, ಗುತ್ತಿಗೆದಾರ ಮೋಹನನ್ ಎಂಬಿವರ ವಿರುದ್ಧ ಕಾಞಂಗಾಡ್ ಫಾರೆಸ್ಟ್ ರೇಂಜ್ ಅಧಿಕಾರಿ ಕೇಸು ದಾಖಲಿಸಿರುವುದು. ಚಿತ್ತಾರಿಕಲ್ ಆಕಚ್ಚೇರಿ ಮೀಸಲು ಅರಣ್ಯದ ಕಂಬಲ್ಲೂರ್ನಲ್ಲಿ ಘಟನೆ ನಡೆದಿದೆ. ಅನುಮತಿ ಇಲ್ಲದೆ ಅರಣ್ಯದೊಳಗೆ ಪ್ರವೇಶಿಸಬಾರದೆಂದು ಮುನ್ನೆಚ್ಚರಿಕೆ ಬೋರ್ಡ್ ಇದ್ದರೂ ಅದನ್ನು ಅವಗಣಿಸಿ ಅಧಿಕಾರಿಗಳು ಒಳಗೆ ಪ್ರವೇಶಿಸಿದ್ದರು. ಇದನ್ನು ಪ್ರಶ್ನಿಸಿದ ಫಾರೆಸ್ಟ್ ವಾಚರ್ ವಿರುದ್ಧ ಕೆಎಸ್ಇಬಿ ಅಧಿಕಾರಿಗಳು ಹಲ್ಲೆ ನಡೆಸಿರುವುದಾಗಿ ದೂರಲಾಗಿತ್ತು.
