ಅರ್ಬುದ ರೋಗ: ಕಡಿಮೆ ಬೆಲೆಗೆ ಔಷಧಗಳ ವಿತರಣೆಗೆ ಕಾರುಣ್ಯ ಫಾರ್ಮಸಿಗಳಲ್ಲಿ ಚಾಲನೆ
ಕಾಸರಗೋಡು: ಅರ್ಬುದ ರೋಗ ಚಿಕಿತ್ಸೆಗಾಗಿರುವ ಔಷಧ ಸಾಮಗ್ರಿಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವ ಸರಕಾರದ ಯೋಜನೆಗೆ ರಾಜ್ಯ ಆರೋಗ್ಯ ಇಲಾಖೆಯ ಆಶ್ರಯದಲ್ಲಿ ಕಾರ್ಯವೆಸಗುತ್ತಿರುವ ರಾಜ್ಯದ ಎಲ್ಲಾ ಕಾರುಣ್ಯ ಫಾರ್ಮಸಿಗಳ ಮೂಲಕ ಚಾಲನೆ ನೀಡಲಾಗಿದೆ.
ತಿರುವನಂತಪುರದಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಈ ಯೋಜನೆಯ ಉದ್ಘಾಟನೆಯನ್ನು ನೆರವೇರಿಸಿದರು.
ಇದರಂತೆ ಮೊದಲ ಹಂತದಲ್ಲಿ ರಾಜ್ಯದ 14 ಜಿಲ್ಲೆಗಳ ತಲಾ ಒಂದರಂತೆ ಕಾರುಣ್ಯ ಫಾರ್ಮಸಿಗಳಲ್ಲಿ ಈ ಯೋಜನೆ ಆರಂಭಿಸಲಾಗಿದೆ. ಇದರಂತೆ ಉತ್ಪಾದನಾ ಸಂಸ್ಥೆಗಳ ಬೆಲೆಗೆ ಕಾರುಣ್ಯ ಫಾರ್ಮಸಿಗಳಲ್ಲಿ ಈ ಔಷಧ ಮಾರಾಟ ಮಾಡಲಾಗುತ್ತಿದೆ. ಕೆ.ಎಂ.ಎಸ್. ಸಿ.ಎಲ್‌ಗೆ ಲಭಿಸಬೇಕಾಗಿರುವ ಶೇ. 7ರ ತನಕದ ಲಾಭವನ್ನು ಇದರಿಂದ ಹೊರತುಪಡಿಸಲಾಗುವುದೆಂದು ಆರೋಗ್ಯ ಸಚಿವೆ ವೀಣಾ ಜೋರ್ಜ್ ತಿಳಿಸಿದ್ದಾರೆ. ಇದರಂತೆ ಕಾಸರಗೋಡು ಜಿಲ್ಲೆಯಲ್ಲಿ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಕಾರ್ಯವೆಸಗುವ ಕಾರುಣ್ಯ ಫಾರ್ಮಸಿಯಲ್ಲಿ ಮಿತ ಬೆಲೆಗೆ ಅರ್ಬುದ ರೋಗ ಔಷಧಗಳು ಲಭಿಸುತ್ತಿವೆ. ದ್ವಿತೀಯ ಹಂತದಲ್ಲಿ ಈ ಯೋಜನೆಯನ್ನು ಇನ್ನಷ್ಟು ಕಾರುಣ್ಯ ಫಾರ್ಮಸಿಗಳಿಗೆ ವಿಸ್ತರಿಸಲು ಸರಕಾರ ತೀರ್ಮಾನಿಸಿದೆ.