ಆಟೋ ರಿಕ್ಷಾ ಬಾಡಿಗೆಗೆ ಕರೆದ ಯುವತಿಯ ಬ್ಯಾಗ್‌ನಿಂದ ಚಿನ್ನದ ಬಳೆ ಕಳವು: ಚಾಲಕನ ಬಂಧನ

ಉಪ್ಪಳ: ಆಟೋ ರಿಕ್ಷಾವನ್ನು ಬಾಡಿಗೆಗೆ ಕರೆದೊಯ್ದು ಮಹಿಳೆಯ ಬ್ಯಾಗ್‌ನಿಂದ ಒಂದು ಮುಕ್ಕಾಲು ಪವನ್ ಚಿನ್ನದ ಬಳೆಗಳನ್ನು ಕಳವು ನಡೆಸಿದ ಚಾಲಕನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.

ಆಟೋ ರಿಕ್ಷಾ ಚಾಲಕನಾದ ಉಪ್ಪಳ ಮಣ್ಣಂಗುಳಿಯ ಮೊಹ ಮ್ಮದ್ ಸಾಕೀಬ್ (22) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಈತನನ್ನು ಪೊಲೀಸರು ನ್ಯಾಯಾಲ ಯದಲ್ಲಿ ಹಾಜರುಪಡಿಸಿದ್ದು ಈ ವೇಳೆ ಆತನಿಗೆ ರಿಮಾಂಡ್ ವಿಧಿಸಲಾಗಿದೆ.

ಉಪ್ಪಳ ಕೋಡಿಬೈಲು ನಿವಾಸಿ ಆಯಿಷತ್ ಮಿಯಾಸ ಎಂಬವರ ಬ್ಯಾಗ್‌ನಿಂದ ಚಿನ್ನದ ಬಳೆ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಮೊಹಮ್ಮದ್ ಸಾಕೀಬ್‌ನನ್ನು ಬಂಧಿಸಲಾಗಿದೆ.  ಈ  ತಿಂಗಳ 24ರಂದು ಮಧ್ಯಾಹ್ನ ಆಯಿಷತ್ ಮಿಯಾಸ ಉಪ್ಪಳದಿಂದ ಆನೆಕಲ್ಲಿನಲ್ಲಿರುವ ತಾಯಿ ಮನೆಗೆ ಮೊಹಮ್ಮದ್ ಸಾಕೀಬ್‌ನ ಆಟೋ ರಿಕ್ಷಾದಲ್ಲಿ ತೆರಳಿದ್ದರು. ರಿಕ್ಷಾವನ್ನು ಮನೆ ಬಳಿ ನಿಲ್ಲಿಸಿದ ಬಳಿಕ ಆಯಿಷತ್ ಮಿಯಾಸ ಬ್ಯಾಗ್‌ನ್ನು ರಿಕ್ಷಾದಲ್ಲಿ ಇರಿಸಿ ತೆರಳಿದ್ದರು. ಅನಂತರ ಅದೇ  ರಿಕ್ಷಾದಲ್ಲಿ ಮರಳಿದರು. ರಿಕ್ಷಾ ಹೊಸಂಗಡಿಗೆ ತಲುಪಿದಾಗ ಆಯಿಷತ್ ಮಿಯಾಸರಲ್ಲಿ ಅಲ್ಲಿ ಇಳಿದು ಬೇರೆ ರಿಕ್ಷಾದಲ್ಲಿ ತೆರಳುವಂತೆ ಚಾಲಕ ತಿಳಿಸಿದ್ದನೆನ್ನಲಾಗಿದೆ. ಇದರಂತೆ ಅಲ್ಲಿ ಇಳಿದ ಬಳಿಕ ಆಯಿಷತ್ ಮಿಯಾಸ ಬ್ಯಾಗ್ ಪರಿಶೀಲಿಸಿದಾಗ ಅದರಲ್ಲಿದ್ದ ಎರಡು ಚಿನ್ನದ ಬಳೆಗಳ ಪೈಕಿ ಒಂದುಮುಕ್ಕಾಲು ಪವನ್‌ನ ಒಂದು ಬಳೆ ನಾಪತ್ತೆಯಾಗಿತ್ತು. ಈ ಬಗ್ಗೆ ಅವರು ಮಂಜೇಶ್ವರ ಪೊಲೀಸರಿಗೆ  ದೂರು ನೀಡಿದ್ದರು. ಅಲ್ಲ್ಲದೆ ಚಾಲಕನ ಮೇಲೆ ಸಂಶಯ ವ್ಯಕ್ತಪಡಿಸಲಾಗಿತ್ತು. ಇದರಂತೆ ಕೇಸು ದಾಖಲಿಸಿಕೊಂಡ ಪೊಲೀಸರು ಮೊನ್ನೆ ಸಂಜೆ ಮೊಹ ಮ್ಮದ್ ಸಾಕೀಬ್‌ನನ್ನು ಕಸ್ಟಡಿಗೆ ತೆಗೆದು ತನಿಖೆಗೊಳಪಡಿಸಿದಾಗ ಚಿನ್ನದ ಬಳೆ ಕಳವುಗೈದ ಬಗ್ಗೆ ಒಪ್ಪಿಕೊಂಡಿದ್ದಾನೆ. ಆ ಬಳೆಯನ್ನು ಉಪ್ಪಳದ ಜ್ಯುವೆಲ್ಲರಿಯೊಂದಕ್ಕೆ ಮಾರಾಟಗೈದು 91,000 ರೂಪಾಯಿ ಪಡೆದಿರುವುದಾಗಿಯೂ ತಿಳಿಸಿದ್ದಾನೆನ್ನಲಾಗಿದೆ.  ಕೂಡಲೇ ಆತನನ್ನು ಜ್ಯುವೆಲ್ಲರಿಗೆ ಕರೆದೊಯ್ದು ಬಳೆಯನ್ನು ಪೊಲೀಸರು ಪತ್ತೆಹಚ್ಚಿ ವಶಕ್ಕೆ ತೆಗೆದುಕೊಂಡಿದ್ದಾರೆ. ಇದೇ ವೇಳೆ ಆಯಿಷತ್ ಮಿಯಾಸರನ್ನು ಠಾಣೆಗೆ ಕರೆಸಿದ್ದು, ಆರೋಪಿಯ ಗುರುತು ಹಚ್ಚಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page