ಆರು ತಿಂಗಳಲ್ಲಿ ಸಂಪೂರ್ಣ ಶುಚಿತ್ವ: ತ್ಯಾಜ್ಯಮುಕ್ತ ನವಕೇರಳ ಅಭಿಯಾನಕ್ಕೆ ಮುಖ್ಯಮಂತ್ರಿಯಿಂದ ಚಾಲನೆ
ಕಾಸರಗೋಡು: ಮುಂದಿನ ಆರು ತಿಂಗಳೊಳಗೆ ಕೇರಳವನ್ನು ಸಂಪೂರ್ಣ ತ್ಯಾಜ್ಯ ಹಾಗೂ ಮಲಿನೀಕರಣಮುಕ್ತ ರಾಜ್ಯವನ್ನಾಗಿ ಮಾರ್ಪಡಿಸುವ ಗುರಿಯೊಂದಿಗೆ ಜ್ಯಾರಿಗೊಳಿಸಲಾ ಗುವ ತ್ಯಾಜ್ಯ ಮುಕ್ತ ನವಕೇರಳ ಯೋಜನೆಗೆ ಗಾಂಧಿ ಜಯಂತಿ ದಿನವಾದ ಇಂದು ರಾಜ್ಯಾದ್ಯಂತ ಚಾಲನೆ ನೀಡಲಾಗಿದೆ.
ಜನರ ಸಹಭಾಗಿತ್ವದೊಂದಿಗೆ ಇದನ್ನು ಜ್ಯಾರಿಗೊಳಿಸಲಾಗುತ್ತಿದೆ. ಶೂನ್ಯ ಮಾಲಿನ್ಯ ದಿನವಾದ 2025ಮಾರ್ಚ್ 30ರೊಳಗಾಗಿ ಕೇರಳವನ್ನು ಸಂಪೂರ್ಣ ತ್ಯಾಜ್ಯ ಹಾಗೂ ಮಲಿನೀಕರಣ ಮುಕ್ತ ರಾಜ್ಯವನ್ನಾಗಿ ಸುವ ಗುರಿಯನ್ನು ಈ ಯೋಜನೆ ಮೂಲಕ ಹಾಕಿಕೊಳ್ಳಲಾಗಿದೆ.
ಕೊಟ್ಟಾರಕೆರೆಯಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಪ್ರಸ್ತುತ ಯೋಜನೆಯ ರಾಜ್ಯ ಮಟ್ಟದ ಉದ್ಘಾಟನೆಯನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೆರವೇರಿಸಿ ದರು. ಸ್ಥಳೀಯಾಡಳಿತ ಸಂಸ್ಥೆಗಳ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಇದನ್ನು ಜ್ಯಾರಿಗೊಳಿಸಲಾಗುತ್ತಿದೆ. ಹಸಿರು ಕೇರಳ ಯೋಜನೆ, ಶುಚಿತ್ವ ಮಿಶನ್, ಮಲಿನೀಕರಣ ನಿಯಂತ್ರಣ ಮಂಡಳಿ, ಕೇರಳ ಘನ ತ್ಯಾಜ್ಯ ಯೋಜನೆ ಮತ್ತು ಕ್ಲೀನ್ ಕೇರಳ ಕಂಪೆನಿಯೂ ಇದರೊಂದಿಗೆ ಕೈಜೋಡಿಸುತ್ತಿದೆ.
ಪ್ರಸ್ತುತ ಯೋಜನೆಯಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಇಂದು ಬೆಳಿಗ್ಗಿನಿಂದ ಶುಚೀಕರಣ ಪ್ರಕ್ರಿಯೆಗಳು ಆರಂಭಗೊಂಡಿವೆ. ತ್ಯಾಜ್ಯವನ್ನು ತೆರವುಗೊಳಿಸುವ ಕೆಲಸಗಳು ಭರದಿಂದ ನಡೆಯುತ್ತಿದೆ. ತ್ಯಾಜ್ಯವನ್ನು ತಂದೆಸೆಯುವವರನ್ನು ಪತ್ತೆಹಚ್ಚಿ ಕಾನೂನು ಪರ ಕ್ರಮಗಳನ್ನು ಇದರ ಜತೆಗೆ ಕೈಗೊಳ್ಳಲಾಗುತ್ತಿದೆ.