ಆರ್‌ಎಸ್‌ಎಸ್ ನೇತಾರರೊಂದಿಗೆ ಎಡಿಜಿಪಿ ಸಮಾಲೋಚನೆ: ಡಿಜಿಪಿಯಿಂದ ತನಿಖೆ
ತಿರುವನಂತಪುರ: ಆರ್‌ಎಸ್‌ಎಸ್ ನೇತಾರರೊಂದಿಗೆ ರಾಜ್ಯ ಕಾನೂನು ಮತ್ತು ಸುವ್ಯವಸ್ಥೆಯ ಹೊಣೆಗಾರಿಕೆ ಹೊಂದಿರುವ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಎಡಿಜಿಪಿ) ಎಂ.ಆರ್. ಅಜಿತ್ ಕುಮಾರ್ ನಡೆಸಿದ ಸಮಾಲೋಚನೆಯ ಹಿನ್ನೆಲೆ ಬಗ್ಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಸರಕಾರದ ನಿರ್ದೇಶದಂತೆ ತನಿಖೆ ಆರಂಭಿಸಿದ್ದಾರೆ. ತನಿಖಾ ವರದಿಯನ್ನು ಅವರು ಶೀಘ್ರ ಸರಕಾರಕ್ಕೆ ಸಲ್ಲಿಸಲಿದ್ದಾರೆಂಬ ಮಾಹಿತಿಯೂ ಇದೆ.
ಎಡಿಜಿಪಿ ಅಜಿತ್ ಕುಮಾರ್ ಪೊಲೀಸ್ ಸೇವಾ ಕಾನೂನು ನಿಬಂಧನೆಗಳನ್ನು ಉಲ್ಲಂಘಿಸಿದ್ದಾರೆಯೇ ಹಾಗೂ ಅಧಿಕಾರ ದುರುಪಯೋಗಗೈದಿದ್ದಾರೆಯೇ ಎಂಬ ವಿಷಯದ ಬಗ್ಗೆ ಡಿಜಿಪಿ ಪ್ರಧಾನವಾಗಿ ತನಿಖೆ ನಡೆಸಲಿದ್ದಾರೆ. ಮಾತ್ರವಲ್ಲ ಆ ಬಗ್ಗೆ ಅವರು ಅಜಿತ್ ಕುಮಾರ್‌ರ ಸ್ಪಷ್ಟೀಕರಣೆಯನ್ನೂ ಕೇಳಲಿದ್ದಾರೆ. ಅಜಿತ್ ಕುಮಾರ್ ತೃಶೂರ್‌ನಲ್ಲಿ ಇತ್ತೀಚೆಗೆ ಆರ್‌ಎಸ್‌ಎಸ್ ನೇತಾರ ದತ್ತಾತ್ರೇಯ ಹೊಸಬಾಳೆ ಮಾತ್ರವಲ್ಲ ಆರ್‌ಎಸ್‌ಎಸ್‌ನ ಇನ್ನೋರ್ವ ಹಿರಿಯ ನೇತಾರ ರಾಂ ಮಾಧವನ್‌ರನ್ನು ತಿರುವನಂತಪುರದಲ್ಲಿ ಸಂದರ್ಶಿಸಿ ಅವರೊಂದಿಗೆ ಸಮಾಲೋಚನೆ ನಡೆಸಿದ್ದರು. ಆದರೆ ಅದು ಕೇವಲ ಒಂದು ಖಾಸಗಿ ಸಂದರ್ಶನ ಮಾತ್ರವೇ ಆಗಿತ್ತು ಎಂದು ಅದಕ್ಕೆ ಅಜಿತ್ ಕುಮಾರ್ ಈಗಾಗಲೇ ಸ್ಪಷ್ಟೀಕರಣ ನೀಡಿದ್ದಾರೆ. ಆರ್‌ಎಸ್‌ಎಸ್ ನೇತಾರರನ್ನು ಸಂದರ್ಶಿಸಿದ ಬಗ್ಗೆ ರಾಜ್ಯ ಪೊಲೀಸ್ ಗುಪ್ತಚರ ವಿಭಾಗವೂ ತನಿಖೆ ನಡೆಸಿ ಸರಕಾರಕ್ಕೆ ಈಗಾಗಲೇ ವರದಿ ಸಲ್ಲಿಸಿದೆ. ಅದನ್ನೂ ಡಿಜಿಪಿ ಪರಿಶೀಲಿಸುವರು.
ಡಿಜಿಪಿ ಸರಕಾರಕ್ಕೆ ಸಲ್ಲಿಸುವ ವರದಿ ಅಜಿತ್ ಕುಮಾರ್‌ಗೆ ಪ್ರತಿಕೂಲವಾಗಿ ಪರಿಣಮಿಸಿದ್ದಲ್ಲಿ ಅದರ ಹೆಸರಲ್ಲಿ ಅವರನ್ನು ತಾತ್ಕಾಲಿಕವಾಗಿ ಪೊಲೀಸ್ ಸೇವಾ ಹೊಣೆಗಾರಿಕೆಯಿಂದ ಬದಿಗೆ ಸರಿಸಿ ನಿಲ್ಲುವ ಸಾಧ್ಯತೆ ಇದೆ. ತನಿಖಾ ವರದಿ ಸಲ್ಲಿಸಿದ ಬಳಿಕ ಅದನ್ನು ಪರಿಶೀಲಿಸಿದ ಬಳಿಕವಷ್ಟೇ ಅದರ ವಿಷಯದಲ್ಲಿ ರಾಜ್ಯ ಸರಕಾರ ಮುಂದಿನ ಕ್ರಮ ಕೈಗೊಳ್ಳಲಿದೆ.
ಆರ್‌ಎಸ್‌ಎಸ್ ನೇತಾರರನ್ನು ಎಡಿಜಿಪಿ ಅಜಿತ್ ಕುಮಾರ್ ಸಂದರ್ಶಿಸಿರುವುದನ್ನು ವಿಪಕ್ಷಗಳು ಸರಕಾರದ ವಿರುದ್ಧ ಒಂದು ಹೊಸ ಆಯುಧವನ್ನಾಗಿ ಈಗ ಪ್ರಯೋಗಿಸತೊಡಗಿದೆ. ಸರಕಾರದ ಮಧ್ಯವರ್ತಿಯಾಗಿ ಎಡಿಜಿಪಿಯವರನ್ನು ಆರ್‌ಎಸ್‌ಎಸ್ ನೇತಾರರ ಸಂದರ್ಶನಕ್ಕಾಗಿ ಕಳುಹಿಸಿಕೊಡಲಾಗಿದೆಯೆಂದೂ ವಿಪಕ್ಷಗಳು ಆರೋಪಿಸತೊಡಗಿವೆ.