ಆರ್‌ಟಿಒ ಡಿಜಿಟಲ್ ಡ್ರೈವಿಂಗ್ ಟೆಸ್ಟ್‌ಗಾಗಿ ನಿರ್ಮಿಸಿದ ಕಟ್ಟಡ ಕಾಡು ಆವರಿಸಿ ನಾಶದತ್ತ

ಕುಂಬಳೆ:  ರಾಜ್ಯ ಸಾರಿಗೆ ಇಲಾಖೆ 4 ಕೋಟಿ 10 ಲಕ್ಷ ರೂಪಾಯಿ ಖರ್ಚುಮಾಡಿ ಬೇಳ ಕುಮಾರಮಂಗಲದಲ್ಲಿ  ಡಿಜಿಟಲ್  ಡ್ರೈವಿಂಗ್ ಟೆಸ್ಟ್ ಗಾಗಿ ನಿರ್ಮಿಸಿದ ಕಟ್ಟಡ ಹಾಗೂ ವಿವಿಧ ಸಾಮಗ್ರಿಗಳು ಕಾಡು ಆವರಿಸಿ ನಾಶಗೊಳ್ಳುತ್ತಿದೆ. 2021ರಲ್ಲಿ ಸಾರಿಗೆ ಇಲಾಖೆ ಸಚಿವ ಈ ಕಟ್ಟಡದ ಉದ್ಘಾಟನೆ ನೆರವೇರಿಸಿದ್ದರು. ಸಂಸ್ಥೆ ಆರಂಭಿಸಲು  ಮಾತ್ರವೇ ಆಸಕ್ತಿ ವಹಿಸುವ ಸರಕಾರ ಅದನ್ನು ಉಳಿಸಿಕೊಂಡು ಉತ್ತಮ ರೀತಿಯ ಚಟುವಟಿಕೆ ನಡೆಸಲು ಕ್ರಮ ಕೈಗೊಳ್ಳದಿರುವುದರ ಫಲವಾಗಿ ಈ ಕಟ್ಟಡ ಇದೀಗ ಕಾಡು ಆವರಿಸಿಕೊಂಡಿದೆ.  ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ಕಟ್ಟಡ ಇದೀಗ ಪ್ರದರ್ಶನ ವಸ್ತುವಾಗಿ ಉಳಿದುಕೊಂಡು ಜಾನುವಾರುಗಳ ಹಾಗೂ ವನ್ಯ ಜೀವಿಗಳ ವಿಹಾರ ಕೇಂದ್ರವಾಗಿದೆಯೆಂದು ನಾಗರಿಕರು ತಿಳಿಸುತ್ತಿದ್ದಾರೆ.  ಸರಕಾರಿ ಸಂಸ್ಥೆಯಲ್ಲಿ ಡಿಜಿಟಲ್ ಡ್ರೈವಿಂಗ್ ಟೆಸ್ಟ್ ಪುನರಾರಂಭಿಸಲು ಬೇಕಾದ ಕ್ರಮ ಕೈಗೊಳ್ಳಬೇಕೆಂದು ಕುಂಬಳೆ ಮಂಡಲ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರವಿ ಪೂಜಾರಿ ಒತ್ತಾಯಿಸಿದ್ದಾರೆ. ಮಂಡಲ ಕಾಂಗ್ರೆಸ್ ಪದಾಧಿಕಾರಿಗಳು ಅವಗಣನೆ ಎದುರಿಸುತ್ತಿರುವ ಈ ಕಟ್ಟಡವನ್ನು ಸಂದರ್ಶಿಸಿದ್ದಾರೆ. 

You cannot copy contents of this page