ಆಲ್ ಕೇರಳ ರೀಟೈಲ್ ರೇಶನ್ ಡೀಲರ್ಸ್ ಅಸೋಸಿಯೇಶನ್ ಜಿಲ್ಲಾ ಸಮ್ಮೇಳನ ಜೂನ್‌ನಲ್ಲಿ

ಕಾಸರಗೋಡು: ಆಲ್ ಕೇರಳ ರೀಟೈಲ್ ರೇಶನ್ ಡೀಲರ್ಸ್ ಅಸೋಸಿಯೇಶನ್ ಜಿಲ್ಲಾ ಸಮಿತಿಯ ಸಮ್ಮೇಳನ ಜೂನ್ 15ರಂದು ಎಕೆಆರ್‌ಆರ್‌ಡಿಎ ಭವನದಲ್ಲಿ ನಡೆಯಲಿದೆ. ಈ ಬಗ್ಗೆ ಇತ್ತೀಚೆಗೆ ನಡೆದ ಜಿಲ್ಲಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಹಲವು ವರ್ಷಗಳಿಂದ ರೇಶನ್ ಅಂಗಡಿ ಮೂಲಕ ವಿತರಿಸುವ ಸೀಮೆಎಣ್ಣೆ ವಿತರಣೆ ಮೊಟಕುಗೊಂಡಿದ್ದು, ಜಿಲ್ಲೆಯ ಸೀಮೆಎಣ್ಣೆ ರಖಂ ವ್ಯಾಪಾರಿಗಳು ಡಿಪೋವನ್ನು ಮುಚ್ಚುಗಡೆಗೊಳಿಸಿದ್ದಾರೆ. ಈಗ ಜಿಲ್ಲೆಯಲ್ಲಿ ಇಬ್ಬರು ಮಾತ್ರವೇ ಸೀಮೆಎಣ್ಣೆ ರಖಂ ವ್ಯಾಪಾರ ಡಿಪೋ ಉಳಿಸಿಕೊಂಡಿದ್ದು, ಒಂದು ಮಂಜೇಶ್ವರ ಹಾಗೂ ಇನ್ನೊಂದು ಹೊಸದುರ್ಗ ತಾಲೂಕಿನಲ್ಲಿದೆ.

ಕಾಸರಗೋಡು ಜಿಲ್ಲೆಯ 365 ರೇಶನ್ ಅಂಗಡಿಗಳಿಗೆ ಕಿಲೋ ಮೀಟರ್‌ಗಳ ತನಕ ವಾಹನದಲ್ಲಿ ಸೀಮೆಎಣ್ಣೆ ವಿತರಿಸುವುದು ದೊಡ್ಡ ನಷ್ಟ ಉಂಟುಮಾಡುತ್ತಿದೆ. ಪ್ರತೀ ತಾಲೂಕಿನಲ್ಲೂ ಪಂಚಾಯತ್ ಕೇಂದ್ರದಲ್ಲಿ ಟ್ಯಾಂಕರ್ ಲಾರಿಗಳಲ್ಲಿ ಸೀಮೆಎಣ್ಣೆ ತಲುಪಿಸಿ ವ್ಯಾಪಾರಿಗಳಿಗೆ ನೀಡಬೇಕು. ಸರಕಾರ ಅಂಗೀಕರಿಸಿದ  ಕಮಿಷನ್ ನೀಡಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಜಿಲ್ಲಾ ಸಪ್ಲೈ ಆಫೀಸರ್‌ಗೆ ಮನವಿ ನೀಡಲು ಸಭೆ ತೀರ್ಮಾನಿಸಿದೆ. ಜಿಲ್ಲಾಧ್ಯಕ್ಷ ಶಂಕರ ಬೆಳ್ಳಿಗೆ ಅಧ್ಯಕ್ಷತೆ ವಹಿಸಿದರು. ರಾಜ್ಯ ಕಾರ್ಯದರ್ಶಿ ಪಿ.ಕೆ. ಅಬ್ದುಲ್ ರಹಿಮಾನ್, ಆರ್ಗನೈಸಿಂಗ್  ಸೆಕ್ರೆಟರಿ ಕೆ. ನಟರಾಜನ್ ಹಾಗೂ ಮುಖಂಡರು ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಬಲ್ಲಾಳ್ ಸ್ವಾಗತಿಸಿ, ಇಬ್ರಾಹಿಂ ಮಂಜೇಶ್ವರ ವಂದಿಸಿದರು.

RELATED NEWS

You cannot copy contents of this page