ಆಸ್ತಿ ವಿವಾದದಿಂದ ಅಣ್ಣನ ಕೊಲೆ: ಇಬ್ಬರಿಗೆ ಇರಿತ; ತಮ್ಮನ ಸೆರೆ

ಕಾಸರಗೋಡು: ಆಸ್ತಿ ವಿವಾದದ ಹೆಸರಲ್ಲಿ ಉಂಟಾದ ಜಗಳದಲ್ಲಿ ತಮ್ಮ ಅಣ್ಣನನ್ನು ಇರಿದು ಬರ್ಭರವಾಗಿ ಕೊಲೆಗೈದ ಭೀಕರ  ಘಟನೆ ನಡೆದಿದೆ. ಇದೇ ವೇಳೆ ಜಗಳ ತಡೆಯಲು ಬಂದ ಇಬ್ಬರು ಇರಿತಕ್ಕೊಳಗಾಗಿ ಗಂಭೀರ ಗಾಯಗೊಂಡಿದ್ದಾರೆ.

ಚೆಮ್ನಾಡು ಮಾವಿಲರೋಡ್ ತೆರವಳಪ್ಪಿಲ್ ಎ. ಚಂದ್ರನ್ ನಾಯರ್(52) ಕೊಲೆಗೈಯ್ಯಲ್ಪಟ್ಟ ವ್ಯಕ್ತಿ. ಕೊಲೆಯನ್ನು ತಡೆಯಲು ಬಂದ ಪೆರವಳಪ್ಪಿಲ್‌ನ ಮಣಿಕಂಠನ್ (48) ಮತ್ತು ಗೋಪಿನಾಥನ್ (48) ಎಂಬವರು ಇರಿತಕ್ಕೊಳಗಾಗಿದ್ದು ಮೃತಪಟ್ಟವರನ್ನು  ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ನಿನ್ನೆ ರಾತ್ರಿ ಸುಮಾರು ೭.೩೦ರ ವೇಳ ಇಡೀ ಊರನ್ನೇ ನಡುಗಿಸಿದ ಈ ಕೊಲೆಕೃತ್ಯ ನಡೆದಿದೆ. ಕೂಲಿ ಕಾರ್ಮಿಕನಾಗಿರುವ ಚಂದ್ರನ್ ಕೆಲಸ ಮುಗಿಸಿ ನಿನ್ನೆ ರಾತ್ರಿ ಮನೆಗೆ ಬಂದಿದ್ದರು. ಆಗ ಆಸ್ತಿ ಹೆಸರಲ್ಲಿ ಅವರು ಮತ್ತು ತಮ್ಮ ಎ. ಗಂಗಾ ಧರನ್  ನಾಯರ್ (48)ರ ಮಧ್ಯೆ ಪರಸ್ಪರ ವಾಗ್ವಾದ ಉಂಟಾಯಿತೆಂದೂ ಆಗ ಗಂಗಾಧರನ್  ಚಾಕುವಿನಿಂದ ಚಂದ್ರನ್‌ರ ಎದೆಗೆ ಇರಿದನೆಂದೂ ಪೊಲೀಸರು ತಿಳಿಸಿದ್ದಾರೆ. ಗಂಭೀರ ಗಾಯಗೊಂಡ ಚಂದ್ರನ್‌ರನ್ನು ನೆರೆಮನೆಯವರು ತಕ್ಷಣ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿದರೂ ಅದು ಫಲಕಾರಿಯಾಗದೆ ಚಂದ್ರನ್ ಸಾವನ್ನಪ್ಪಿದರು. ಜಗಳವನ್ನು ತಡೆಯಲು ಹೋದ ಮಣಿಕಂಠನ್ ಮತ್ತು ಗೋಪಿನಾಥನ್‌ರಿಗೂ ಆರೋಪಿ ಗಂಗಾಧರನ್ ಇರಿದು ಗಾಯ ಗೊಳಿಸಿರುವುದಾಗಿಯೂ ಪೊಲೀಸರು ತಿಳಿಸಿದ್ದಾರೆ. ಬಳಿಕ ನೆರೆಮನೆಯವರು ಸೇರಿ ಗಂಗಾಧರನ್‌ನನ್ನು ಸೆರೆಹಿಡಿದು ಪೊಲೀಸರ ಕೈಗೆ ಒಪ್ಪಿಸಿದ್ದಾರೆ.  ಮೇಲ್ಪರಂಬ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ಸಮಗ್ರ ತನಿಖೆ ಆರಂಭಿಸಿದ್ದಾರೆ. ಚಂದ್ರನ್‌ರ ಮೃತದೇಹವನ್ನು ಜನರಲ್ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆಗೊಳಪಡಿಸಲಾಯಿತು.

ಅವಿವಾಹಿತನಾದ ಆರೋಪಿ ಗಂಗಾಧರನ್ ಕೆಲವು ಸಮಯದಿಂದ ಊರಿನಲ್ಲಿ ಇದ್ದಿರಲಿಲ್ಲ. ನಿನ್ನೆಯಷ್ಟೇ ಆತ ಊರಿಗೆ ಹಿಂತಿರುಗಿದ್ದನು. ಆಸ್ತಿ ಹೆಸರಲ್ಲಿ ಅಣ್ಣತಮ್ಮಂದಿರ ನಡುವೆ ಇತ್ತೀಚೆಗಿನಿಂದ ಪದೇ ಪದೇ ಜಗಳ ಉಂಟಾಗುತ್ತಿತ್ತೆಂದೂ ನೆರೆಮನೆಯವರು ಹೇಳುತ್ತಿದ್ದಾರೆ. ಆ ಜಗಳ ನಿನ್ನೆ ರಾತ್ರಿ ಚಂದ್ರನ್ ಕೊಲೆಗೆ  ದಾರಿ ಮಾಡಿಕೊಟ್ಟಿತ್ತೆಂದು ನೆರೆಮನೆಯವರು ತಿಳಿಸಿದ್ದಾರೆ.ಎಂ. ಕುಮಾರನ್ ನಾಯರ್ ಮತ್ತು ಐಂಗೂರನ್ ಕುಂಞ್ಞಾಮ್ಮಾರಮ್ಮ (ಜಾನಕಿ) ದಂಪತಿ ಪುತ್ರನಾಗಿರುವ ಮೃತ ಚಂದ್ರನ್ ಪತ್ನಿ ರಮಣಿ, ಮಕ್ಕಳಾದ ಕೆ. ಮಾಳವಿಕ, ಕೆ, ಶಿವಮಾಯ, ಇನ್ನೋರ್ವ ಸಹೋದರ ಎ. ನಾರಾಯಣನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page