ಇರಿದು ಯುವಕನನ್ನು ಕೊಲೆಗೈದ ಪ್ರಕರಣ : ಆರೋಪಿಗೆ ಜೀವಾವಧಿ ಸಜೆ, ಜುಲ್ಮಾನೆ
ಕಾಸರಗೋಡು: ಪನತ್ತಡಿ ಶಿವಪುರಂ ಚಾಮುಂಡಿಕುನ್ನುನಲ್ಲಿ ಆಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಪನತ್ತಡಿ ಪುಲಿಕಡವಿನ ಕೆ.ಎಸ್. ಮೋಹನ್ದಾಸ್ ಎಂಬವರ ಮಗ ಅರುಣ್ ಮೋಹನ್ ಅಲಿಯಾಸ್ ಅರುಣ್ಲಾಲ್ (೩೬) ಮತ್ತು ಕೆ.ಜೆ. ಬಿಜು (೨೮) ಎಂಬವರನ್ನು ತಡೆದು ನಿಲ್ಲಿಸಿ ಚಾಕುವಿನಿಂದ ಇರಿದು ಅರುಣ್ಲಾಲ್ರನ್ನು ಕೊಲೆಗೈದ ಪ್ರಕರಣದ ಆರೋಪಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (೧)ದ ನ್ಯಾಯಾಧೀಶರಾದ ಎ. ಮನೋಜ್ ಅವರು ಜೀವಾವಧಿ ಸಜೆ ಮತ್ತು ಒಂದು ಲಕ್ಷ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ.
ಪನತ್ತಡಿ ಶಿವಪುರಂ ಚಾಮುಂಡಿ ಕುನ್ನು ಕೋಟೇರಿಯಿಲ್ ಕೆ.ಎಂ. ಜೋಸೆಫ್ (೫೮) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿ ಸದಿದ್ದಲ್ಲಿ ಆರೋಪಿ ಎರಡು ವರ್ಷ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ ಎಂದೂ ತೀರ್ಪಿನಲ್ಲಿ ತಿಳಿಸಲಾಗಿದೆ. ಇದರ ಹೊರತಾಗಿ ಆಟೋರಿಕ್ಷಾದಲ್ಲಿದ್ದ ಕೆ.ಜೆ. ಬಿಜು (೨೮)ರನ್ನು ಇರಿದು ಕೊಲೆಗೈಯ್ಯಲೆತ್ನಿಸಿದುದಕ್ಕೆ ಸಂಬಂಧಿಸಿ ಆರೋಪಿ ಜೋಸೆಫ್ನಿಗೆ ನ್ಯಾಯಾ ಲಯ ಐದು ವರ್ಷ ಕಠಿಣ ಸಜೆ ಮತ್ತು ಒಂದು ಲಕ್ಷ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಎರಡು ವರ್ಷ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ ಎಂದೂ ತೀರ್ಪಿನಲ್ಲಿ ತಿಳಿಸಲಾಗಿದೆ.
೨೦೧೪ ಜೂನ್ ೨೫ರಂದು ಅರುಣ್ಲಾಲ್ನನ್ನು ಇರಿದು ಕೊಲೆಗೈದು, ಬಿಜುನನ್ನು ಕೊಲೆಗೈಯ್ಯಲೆತ್ನಿಸಿದ ಘಟನೆ ನಡೆದಿತ್ತು. ವೆಳ್ಳರಿಕುಂಡ್ ಪೊಲೀಸರು ಈ ಬಗ್ಗೆ ತನಿಕೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರೋಸಿ ಕ್ಯೂನ್ ಪರವಾಗಿ ಹೆಚ್ಚುವರಿ ಪಬ್ಲಿಕ್ ಪ್ರೋಸಿಕ್ಯೂಟರ್ ಇ. ಲೋಹಿತಾಕ್ಷನ್ ಅವರು ನ್ಯಾಯಾಲಯದಲ್ಲಿ ವಾದಿಸಿದ್ದರು.