ಇರಿಯಣ್ಣಿಯಲ್ಲಿ ಇಂದು ಮತ್ತೆ ಚಿರತೆ ಪ್ರತ್ಯಕ್ಷ: ಅಪಾಯದಿಂದ ಪಾರಾದ ಮಹಿಳೆ
ಬೋವಿಕ್ಕಾನ: ಇರಿಯಣ್ಣಿ ಪೇಟೆ ಸಮೀಪ ಇಂದು ಬೆಳಿಗ್ಗೆ ಚಿರತೆ ಕಂಡುಬಂದ ಬಗ್ಗೆ ವರದಿಯಾಗಿದೆ.
ಇರಿಯಣ್ಣಿ ಆಯುರ್ವೇದ ಆಸ್ಪತ್ರೆ ಸಮೀಪದಲ್ಲಿ ಇಂದು ಬೆಳಿಗ್ಗೆ 7.20ರ ವೇಳೆ ಚಿರತೆ ಪತ್ತೆಯಾಗಿದೆ. ಮರದ ಮೇಲಿಂದ ಚಿರತೆ ಕೆಳಕ್ಕೆ ಜಿಗಿದಿದೆ. ಅದನ್ನು ಕಂಡ ಸ್ಥಳೀಯ ನಿವಾಸಿ ಮಹಿಳೆ ಬೊಬ್ಬೆ ಹಾಕಿದ್ದು, ಅಷ್ಟರಲ್ಲಿ ಅದು ಓಡಿ ಪರಾರಿಯಾಗಿದೆ. ಚಿರತೆ ಕುಟ್ಟಿಯಡ್ಕ ಭಾಗಕ್ಕೆ ತೆರಳಿದೆಯೆಂದು ಸ್ಥಳೀಯರು ತಿಳಿಸಿದ್ದಾರೆ. ಮುಳಿಯಾರು ಮೀಸಲು ಅರಣ್ಯ ಸಮೀಪದಲ್ಲೇ ಇರಿಯಣ್ಣಿ ಪೇಟೆಯಿದೆ. ಸಮೀಪ ಪ್ರದೇಶದಲ್ಲಿ ಹಲವು ಕುಟುಂಬಗಳು ವಾಸಿಸುತ್ತಿದ್ದು ನಿತ್ಯ ಜನಸಂಚಾರವಿರುವ ಸ್ಥಳವಾಗಿದೆ. ಈ ಹಿಂದೆ ಸಂಜೆ ಹಾಗೂ ರಾತ್ರಿ ಹೊತ್ತಿನಲ್ಲಿ ಮಾತ್ರವೇ ಚಿರತೆ ಕಂಡುಬಂದಿತ್ತು. ಇದೀಗ ಬೆಳಿಗ್ಗೆ ಹೊತ್ತಿನಲ್ಲಿ ಚಿರತೆ ಕಾಣಿಸಿಕೊಂಡಿರುವುದರಿಂದ ನಾಗರಿಕರು ಭೀತಿಯಲ್ಲಿದ್ದಾರೆ.
ಕಳೆದ ಐದು ದಿನಗಳಲ್ಲಿ ಇದು ಮೂರನೇ ಬಾರಿ ಇರಿಯಣ್ಣಿಯಲ್ಲಿ ಚಿರತೆ ಕಂಡುಬಂದಿದೆ. ಚಿರತೆ ಭೀತಿಯನ್ನು ನಿವಾರಿಸಲು ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳನ್ನು ಒತ್ತಾಯಿಸಿ ನಾಗರಿಕರು ಚಳವಳಿಗೆ ಸಿದ್ಧತೆ ನಡೆಸುತ್ತಿದ್ದಾರೆ.