ಉದ್ಯಮಿ ಗಫೂರ್ ಹಾಜಿ ಸಾವು ಕೊಲೆಯೆಂದು ಸಾಬೀತು: ಮಂತ್ರವಾದಿ ಮಹಿಳೆ ಸಹಿತ ನಾಲ್ಕು ಮಂದಿ ಸೆರೆ
ಕಾಸರಗೋಡು: ಪಳ್ಳಿಕೆರೆ ಪೂಚಕ್ಕಾಡ್ನ ಫಾರೂಕ್ ಮಸೀದಿ ಸಮೀಪದ ನಿವಾಸಿ ಅನಿವಾಸಿ ಉದ್ಯಮಿಯಾದ ಅಬ್ದುಲ್ ಗಫೂರ್ ಹಾಜಿ (53) ಎಂಬವರ ಸಾವು ಕೊಲೆಯೆಂದು ಸಾಬೀತುಗೊಂಡಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿ ನಾಲ್ಕು ಮಂದಿಯನ್ನು ಪ್ರತ್ಯೇಕ ತನಿಖಾ ತಂಡ ಬಂಧಿಸಿದೆ. ಜಿನ್ನುಮ್ಮ ಯಾನೆ ಶಮೀಮ, ಈಕೆಯ ಪತಿ ಉಬೈಸ್, ಸಹಾಯಕರಾದ ಪೂಚಕ್ಕಾಡ್ನ ಅಸ್ನೀಫ, ಮಧೂರು ನಿವಾಸಿ ಆಯಿಶಾ ಎಂಬಿವರನ್ನು ಪೊಲೀಸರು ಬಂಧಿಸಿದ್ದಾರೆ. ಡಿಸಿಆರ್ಬಿ ಡಿವೈಎಸ್ಪಿಯ ನೇತೃತ್ವದಲ್ಲಿ ಪ್ರತ್ಯೇಕ ತಂಡ ಆರೋಪಿಗಳನ್ನು ಸೆರೆಹಿಡಿದಿದೆ. 2023 ಎಪ್ರಿಲ್ 14ರಂದು ಮುಂ ಜಾನೆ ಅಬ್ದುಲ್ ಗಫೂರ್ ನಿಗೂಢ ರೀತಿಯಲ್ಲಿ ಮನೆಯೊಳಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಸಹಜ ಸಾವೆಂಬ ನೆಲೆಯಲ್ಲಿ ದಫನ ಮಾಡಿದ ಮೃತದೇಹವನ್ನು ಬಳಿಕ ಮಗನ ದೂರಿನ ಹಿನ್ನೆಲೆಯಲ್ಲಿ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ತಲೆಗೆ ಉಂಟಾದ ಗಂಭೀರ ಹೊಡೆತವೇ ಸಾವಿಗೆ ಕಾರಣವಾಗಿದೆ ಯೆಂದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದುಬಂದಿದೆ. ಗಫೂರ್ ಹಾಜಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಬಳಿಕ ನಡೆಸಿದ ತನಿಖೆಯಲ್ಲಿ ಮನೆಯಿಂದ 612 ಚಿನ್ನಾಭರಣ ಕಳವುಗೈದಿರುವುದಾಗಿ ತಿಳಿದುಬಂ ದಿತ್ತು. ಗಫೂರ್ ಹಾಜಿ ಸಾವಿಗೀ ಡಾದ ಸ್ಥಿತಿಯಲ್ಲಿ ಪತ್ತೆಯಾದ ದಿನದ ಹಿಂದಿನ ದಿನ ಪತ್ನಿ ಮಕ್ಕಳೊಂದಿಗೆ ತವರುಮನೆಗೆ ಹೋಗಿದ್ದರು. ಇದರಿಂದ ಗಫೂರ್ ಹಾಜಿ ಮಾತ್ರವೇ ಮನೆಯಲ್ಲಿದ್ದರು. 14ರಂದು ಮುಂಜಾನೆ ಮನೆಯಲ್ಲಿ ಯಾರೂ ಕಂಡುಬಾರದ ಹಿನ್ನೆಲೆಯಲ್ಲಿ ನೆರೆಮನೆಯವರು ಹೋಗಿ ನೋಡಿದಾಗ ಗಫೂರ್ ಹಾಜಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರ ಚಿನ್ನಾಭರಣ ದೋಚುವ ಉದ್ದೇಶದಿಂದ ಗಫೂರ್ ಹಾಜಿಯನ್ನು ಕೊಲೆಗೈದಿರಬಹುದೆಂದು ಸಂಶಯಿಸಲಾಗಿತ್ತು.
ಅಲ್ಲದೆ ಗಫೂರ್ ಹಾಜಿ ಮೃತಪಟ್ಟ ದಿನ ಮಂತ್ರವಾದಿ ಮಹಿಳೆ ಆ ಮನೆಗೆ ಹೋಗಿದ್ದು ಇದು ಸಂಶಯ ಕ್ಕೆಡೆಮಾಡಿಕೊಟ್ಟಿತು. ಮೊದಲು ಬೇಕಲ ಪೊಲೀಸರು ತನಿಖೆ ನಡೆಸಿದ ಈ ಪ್ರಕರಣವನ್ನು ಇತ್ತೀಚೆಗೆ ಡಿಸಿಆರ್ಬಿಗೆ ಹಸ್ತಾಂತರಿಸಲಾಗಿತ್ತು. ಪೊಲೀಸರ ಸಮಗ್ರ ತನಿಖೆಯಲ್ಲಿ ಇದೀಗ ನಾಲ್ಕು ಮಂದಿಯನ್ನು ಸೆರೆಹಿಡಿಯಲು ಸಾಧ್ಯವಾಗಿದೆ.
ಗಫೂರ್ ಹಾಜಿ ಹಾಗೂ ಸಹೋದರರಿಗೆ ಶಾರ್ಜಾ ಹಾಗೂ ದುಬಾಯಿಯಲ್ಲಿ ನಾಲ್ಕರಷ್ಟು ಸೂಪರ್ ಮಾರ್ಕೆಟ್ಗಳಿವೆ.